ಹೊಳೆನರಸೀಪುರ: ತಾಲೂಕಿನ ಕಬ್ಬೂರು ಗ್ರಾಮದ ಸಮೀಪ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿ, 7 ಕೆಜಿ ಗಾಂಜಾ, ಸ್ಕೂಟಿ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಮಹಿಳೆಯನ್ನು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮೇಲೂರು ಗ್ರಾಮದ ಶೀಲಾ ಎಂದು ಗುರುತಿಸಲಾಗಿದ್ದು, ಆಕೆಯೊಂದಿಗೆ ಇದ್ದ ಜಬಿ ಎಂಬಾತ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರ ಮಾಹಿತಿ ಪ್ರಕಾರ, ಶೀಲಾ ಕೆಎ-04-ಎಲ್ಸಿ-7204 ಸಂಖ್ಯೆಯ ಸ್ಕೂಟಿಯಲ್ಲಿ ಹಾಗೂ ಜಬಿ ಕೆಎ-11-ಎಂ-8783 ಸಂಖ್ಯೆಯ ಕಾರಿನಲ್ಲಿ ಗಾಂಜಾ ಸಾಗಿಸಿಕೊಂಡು ಬಂದಿದ್ದರು. ಕಬ್ಬೂರು ಸಮೀಪದ ಮರೆಮಂಟಿ ಕಾಡಿನ ಬಳಿಯ ನಿರ್ಜನ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡಲು ಸಂಚು ರೂಪಿಸಿದ್ದರೆಂಬ ಖಚಿತ ಮಾಹಿತಿ ಮೇರೆಗೆ ಹಳ್ಳಿ ಮೈಸೂರು ಠಾಣೆ ಪೊಲೀಸರು ದಾಳಿ ನಡೆಸಿದರು. ಪೊಲೀಸರ ದಾಳಿಯ ವೇಳೆ ಜಬಿ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಶೀಲಾಳನ್ನು ಸುಮಾರು 7 ಕೆಜಿ ಗಾಂಜಾ ಸಮೇತ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದ ಸ್ಕೂಟಿ ಹಾಗೂ ಕಾರನ್ನೂ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿ ಜಬಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಸಿಪಿಐ ಸಂತೋಷ್ ಮಾರ್ಗದರ್ಶನದ ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ನವ್ಯಾ ಹಾಗೂ ಪೊಲೀಸ್ ಸಿಬ್ಬಂದಿ ರಂಗಸ್ವಾಮಿ, ನವೀನ್ ಮತ್ತು ಅರುಣ ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

