ಖಾಕಿಯೊಳಗಿನ ಸ್ಫೋಟಕ ಆರೋಪ..! ಈ-ಬೀಟ್ ವಿರುದ್ಧ ಕಾನ್ಸ್‌ಟೇಬಲ್ ದೂರು – ಡಿಜಿಪಿಗೆ ವರದಿ ಕೇಳಿದ ಸರ್ಕಾರ..!
ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್‌ನಲ್ಲಿ ಜಾರಿಯಲ್ಲಿರುವ ಈ-ಬೀಟ್ ವ್ಯವಸ್ಥೆ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ. ಪೊಲೀಸ್ ಸಿಬ್ಬಂದಿಯೊಬ್ಬರು ಮುಖ್ಯಮಂತ್ರಿ ಅವರಿಗೆ ಬರೆದಿರುವ ಪತ್ರದಲ್ಲಿ, ಕಿರಿಯ ಸಿಬ್ಬಂದಿಗೆ ಅತಿಯಾದ ಕೆಲಸದ ಒತ್ತಡ, ಮಾನಸಿಕ ಕಿರುಕುಳ, ಅನ್ಯಾಯ ಹಾಗೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ….
ಪತ್ರದಲ್ಲಿ ಹಿರಿಯ ಅಧಿಕಾರಿಗಳು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದು, ಸಣ್ಣಪುಟ್ಟ ತಪ್ಪುಗಳಿಗೂ ಬೀಟ್ ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿ ಮಾಡಿ ಅಮಾನತುಗೊಳಿಸಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಅಕ್ರಮ ಚಟುವಟಿಕೆಗಳ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದೆ, ನಂತರ ಯಾವುದೇ ಘಟನೆ ನಡೆದರೆ ಕಿರಿಯ ಸಿಬ್ಬಂದಿಯನ್ನೇ ಬಲಿಪಶು ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ…
ಇದರ ಜೊತೆಗೆ ಠಾಣೆ ಪೋಸ್ಟಿಂಗ್‌ಗಳಿಗೆ ಲಂಚದ ವ್ಯವಹಾರ, ಜಿಪಿಎಸ್ ಆಧಾರಿತ ಹಾಜರಾತಿ ವ್ಯವಸ್ಥೆಯ ದುರುಪಯೋಗ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಪತ್ರದಲ್ಲಿ ಮಾಡಲಾಗಿದೆ.. 
ಈ ದೂರಿನ ಹಿನ್ನೆಲೆಯಲ್ಲಿ ಗೃಹ ಇಲಾಖೆ ಪರಿಶೀಲನೆ ಆರಂಭಿಸಿದ್ದು, ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಿಂದ ವರದಿ ಸಲ್ಲಿಸುವಂತೆ ಡಿಜಿ ಮತ್ತು ಐಜಿಪಿ ಸೂಚಿಸಿದ್ದಾರೆ. ಈ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಶ್ರುತಿ ಎನ್.ಎಸ್. ತಿಳಿಸಿದ್ದಾರೆ..
ಈ ಬೆಳವಣಿಗೆ ಪೊಲೀಸ್ ಇಲಾಖೆಯ ಈ-ಬೀಟ್ ವ್ಯವಸ್ಥೆ ಹಾಗೂ ಆಡಳಿತದ ಕಾರ್ಯವೈಖರಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ತನಿಖೆಯ ವರದಿಯತ್ತ ಎಲ್ಲರ ಗಮನ ನೆಟ್ಟಿದೆ..
ಸೂಚನೆ: ಈ ಕಥನದಲ್ಲಿರುವ ಆರೋಪಗಳು ಪತ್ರದಲ್ಲಿರುವ ದೂರಿನ ಆಧಾರಿತವಾಗಿವೆ. ತನಿಖೆ ಪೂರ್ಣಗೊಂಡ ನಂತರವೇ ಆರೋಪಗಳ ಸತ್ಯಾಸತ್ಯತೆ ಅಧಿಕೃತವಾಗಿ ನಿರ್ಧಾರವಾಗಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

