ತುಮಕೂರು ಉಪವಿಭಾಗದ ಡಿವೈಎಸ್‌ಪಿ ಚಂದ್ರಶೇಖರ್ ಆರಂಭಿಸಿದ್ದ ಕ್ಯೂಆರ್ ಕೋಡ್ ಆಧಾರಿತ ಡ್ರಗ್ಸ್ ಜಾಗೃತಿ ಅಭಿಯಾನವೇ ಭಾರೀ ಗಾಂಜಾ ಜಾಲವನ್ನು ಬಯಲಿಗೆಳೆದಿದೆ. ಸಾರ್ವಜನಿಕರು ಗುಪ್ತವಾಗಿ ನೀಡಿದ ಮಾಹಿತಿಯ ಆಧಾರದಲ್ಲಿ ತಿಲಕ್ ಪಾರ್ಕ್ ಪೊಲೀಸರು ದಾಳಿ ನಡೆಸಿ, ಪೊಲೀಸ್ ಸಿಬ್ಬಂದಿಯ ಪುತ್ರನೇ ಗಾಂಜಾ ದಂಧೆಯ ಪ್ರಮುಖ ರೂವಾರಿಯೆಂಬ ಆಘಾತಕಾರಿ ಸಂಗತಿಯನ್ನು ಪತ್ತೆಹಚ್ಚಿದ್ದಾರೆ. ಬಂಧಿತ ಪ್ರಮುಖ ಆರೋಪಿ ದಿಶಾಂತ್ (21) ಬಿಸಿಎ ವಿದ್ಯಾರ್ಥಿಯಾಗಿದ್ದು, ಬೆಂಗಳೂರಿನಿಂದ ಸಾಮಾನ್ಯ ಗಾಂಜಾ ಹಾಗೂ ದುಬಾರಿ ‘ಹೈಡ್ರೋ ಗಾಂಜಾ’ ತರಿಸಿಕೊಂಡು ತುಮಕೂರಿನಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಮೊದಲ ಹಂತದಲ್ಲಿ ಆರು ಮಂದಿಯನ್ನು ಬಂಧಿಸಿದ್ದ ಪೊಲೀಸರು, ಬಳಿಕ ಇನ್ನೂ ಮೂವರನ್ನು ವಶಕ್ಕೆ ಪಡೆದು ಒಟ್ಟು ಒಂಬತ್ತು ಮಂದಿಯನ್ನು ಜೈಲು ಪಾಲಾಗಿಸಿದ್ದಾರೆ. ಆರೋಪಿಗಳಿಂದ ಫಾರ್ಚ್ಯೂನರ್ ಕಾರು ಹಾಗೂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

