ದಕ್ಷಿಣ ಕನ್ನಡ: ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ತಲವಾರು ತೋರಿಸಿ ಬೆದರಿಸಿ ₹8.35 ಲಕ್ಷ ನಗದು ಸುಲಿಗೆ ಮಾಡಿ ಪರಾರಿಯಾಗಿದ್ದಾರೆ. ಘಟನೆ ಗುರುವಾರ ಮಧ್ಯಾಹ್ನ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ಮಯ್ಯದಿ (61) ಅವರು ಮಂಗಳೂರಿನ ಕಣ್ಣೂರಿನ ಸಿಮೆಂಟ್ ಹಾಗೂ ಕಬ್ಬಿಣದ ಸಗಟು ಮಾರಾಟ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ವಿವಿಧ ಅಂಗಡಿಗಳಿಂದ ಹಣ ಸಂಗ್ರಹಿಸಿಕೊಂಡು ಬಂಟ್ವಾಳದತ್ತ ತೆರಳುತ್ತಿದ್ದಾಗ ನಿರ್ಜನ ಪ್ರದೇಶದಲ್ಲಿ ಆರೋಪಿಗಳು ಬೈಕ್ ಅಡ್ಡಗಟ್ಟಿ ಬ್ಯಾಗ್‌ನಲ್ಲಿದ್ದ ಹಣವನ್ನು ದೋಚಿದ್ದಾರೆ. ಅಂಗಡಿಗಳಿಂದ ಹಣ ಸಂಗ್ರಹಿಸುವ ಮಾಹಿತಿ ಪಡೆದು ಆರೋಪಿಗಳು ಸಂಚು ರೂಪಿಸಿ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

