ತುಮಕೂರು: ಜಮೀನಿನಲ್ಲಿ ಪ್ರಾಣಿಗಳನ್ನು ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿದ್ದ ಚಿರತೆಯನ್ನು ಜೀವಂತವಾಗಿಯೇ ಸುಟ್ಟು ಹಾಕಿದ ಆರೋಪದ ಮೇಲೆ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ತುಮಕೂರು ತಾಲೂಕಿನ ಗೌರಗೊಂಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ನಿವಾಸಿಗಳಾದ ನಾರಾಯಣಪ್ಪ, ಶಿವಕುಮಾರ್ ಹಾಗೂ ಚಂದ್ರಶೇಖರ್ ಬಂಧಿತ ಆರೋಪಿಗಳು. ಉರುಳಿಗೆ ಚಿರತೆ ಸಿಲುಕಿರುವ ವಿಷಯ ಬಹಿರಂಗವಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಭಯದಿಂದ ಆರೋಪಿಗಳು ಚಿರತೆಯನ್ನು ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ. ಘಟನೆ ಬೆಳಕಿಗೆ ಬಂದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಮೂವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಅರೆಬೆಂದ ಸ್ಥಿತಿಯಲ್ಲಿದ್ದ ಚಿರತೆಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಬನ್ನೇರುಘಟ್ಟದಿಂದ ಆಗಮಿಸಿದ ತಜ್ಞ ಪಶುವೈದ್ಯರ ತಂಡ ನಡೆಸಿದೆ. ಪ್ರಮುಖ ಅಂಗಾಂಶಗಳ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವರೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

