ಬೆಂಗಳೂರು: ಪಾಕಿಸ್ತಾನ ಸೇನೆ ಮೇಲೆ ದಾಳಿ ನಡೆಸಲು ಅಫ್ಘಾನಿಸ್ತಾನಕ್ಕೆ ತೆರಳಿ TTP ಸಂಘಟನೆ ಸೇರಲು ಸಂಚು ರೂಪಿಸಿದ ಆರೋಪದ ಮೇಲೆ 25 ವರ್ಷದ ಭದ್ರತಾ ಸಿಬ್ಬಂದಿ ಆಸಾಫುಲ್ ಮಲಿಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 11ರಂದು ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಬಂಧಿಸಲಾಗಿದ್ದು, NIA ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸುತ್ತಿವೆ. ಪಶ್ಚಿಮ ಬಂಗಾಳ ಮೂಲದ ಮಲಿಕ್ ಬೆಂಗಳೂರಿನ ಜಿಗಣಿಯಲ್ಲಿ ವಾಸವಿದ್ದು, ಬೊಮ್ಮಸಂದ್ರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಮೊಬೈಲ್ ಪರಿಶೀಲನೆ ವೇಳೆ ಅಫ್ಘಾನಿಸ್ತಾನದಲ್ಲಿರುವ TTP ಸದಸ್ಯನೆಂದು ಹೇಳಿಕೊಂಡ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ಮಾಹಿತಿ ಪತ್ತೆಯಾಗಿದೆ. ಅಫ್ಘಾನಿಸ್ತಾನಕ್ಕೆ ತೆರಳಲು ಪಾಸ್‌ಪೋರ್ಟ್ ಪಡೆದು ವೀಸಾಕ್ಕೂ ಅರ್ಜಿ ಸಲ್ಲಿಸಿದ್ದ ಎನ್ನಲಾಗಿದೆ. ಆರ್ಥಿಕ ಸಂಕಷ್ಟ ಹಾಗೂ ಕುಟುಂಬದ ಕಲಹದಿಂದ ಯೋಜನೆ ಮುಂದುವರಿಸಲು ಸಾಧ್ಯವಾಗಲಿಲ್ಲ ಎಂದು ವಿಚಾರಣೆ ವೇಳೆ ಮಲಿಕ್ ತಿಳಿಸಿದ್ದಾನೆ ಎನ್ನಲಾಗಿದೆ. ಪಾಕಿಸ್ತಾನ ಸೇನೆ ನಾಗರಿಕರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂಬ ನಂಬಿಕೆಯಿಂದ ಅಫ್ಘಾನಿಸ್ತಾನದ ಇಮ್ರಾನ್ ಹೈದರ್‌ಗೆ ಸಹಾಯ ಮಾಡಲು ಬಯಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

