ಬೆಂಗಳೂರು: ಮಡಿವಾಳ ಅಂಡರ್‌ಪಾಸ್ ಬಳಿ ಮೆಡಿಕಲ್ ಶಾಪ್ ಮಾಲೀಕ ಸುಹೇಲ್‌ರನ್ನು ನಡುರಸ್ತೆಯಲ್ಲೇ ಬರ್ಬರವಾಗಿ ಹತ್ಯೆಗೈದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಘಟನೆ ನಡೆದ 24 ಗಂಟೆಯೊಳಗೆ ರೌಡಿಶೀಟರ್ ಆದಿಲ್ ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆಯಲ್ಲಿ, ಹಳೆಯ ದ್ವೇಷವೇ ಹತ್ಯೆಗೆ ಪ್ರಮುಖ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಜನವರಿಯಲ್ಲಿ ಬಂಡೆಪಾಳ್ಯದಲ್ಲಿ ನಡೆದ ಶಬ್ಬೀರ್ ಹತ್ಯೆ ಪ್ರಕರಣದಲ್ಲಿ ಸುಹೇಲ್ ಸಹೋದರರು ಭಾಗಿಯಾಗಿದ್ದರು ಎನ್ನಲಾಗಿದ್ದು, ಶಬ್ಬೀರ್‌ನ ಆಪ್ತನಾಗಿದ್ದ ಆದಿಲ್ ಸುಹೇಲ್ ಕುಟುಂಬದ ವಿರುದ್ಧ ದ್ವೇಷ ಹೊಂದಿದ್ದ ಎನ್ನಲಾಗಿದೆ. ಹತ್ಯೆಯ ಬಳಿಕ ಆರೋಪಿಗಳು ಬಿಡದಿಗೆ ತೆರಳಿ, ಅಲ್ಲಿಂದ ಲಾರಿ ಮೂಲಕ ಮುಂಬೈಗೆ ಪರಾರಿಯಾಗಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಮಡಿವಾಳ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಹತ್ಯೆಯ ನಿಖರ ಕಾರಣ ಹಾಗೂ ಪ್ರತಿಯೊಬ್ಬ ಆರೋಪಿಯ ಪಾತ್ರದ ಕುರಿತು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

