ಕಲಬುರಗಿ: ಖೋಟಾ ನೋಟು ತಯಾರಿಸಿ ಚಲಾವಣೆಗೆ ತರಲು ಸಂಚು ರೂಪಿಸಿದ್ದ ಜಾಲವನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ. ರಾಜರಾಜೇಶ್ವರಿ ನಗರದ ಬಾಡಿಗೆ ಮನೆಯಲ್ಲಿ ಕಲರ್ ಪ್ರಿಂಟರ್ ಬಳಸಿ ನಕಲಿ ನೋಟು ಮುದ್ರಿಸುತ್ತಿದ್ದ ದಶರಥ್ ರಾಠೋಡ್ ಹಾಗೂ ಸಿದ್ರಾಮ್ ಎಂಬುವರನ್ನು ಬಂಧಿಸಲಾಗಿದ್ದು, ₹500 ಮುಖಬೆಲೆಯ 28 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಓರ್ವ ಆರೋಪಿ ಅಶ್ವಿನ್ ಕುಮಾರ್ ಪರಾರಿಯಾಗಿದ್ದಾನೆ. ಸಾಲ ತೀರಿಸಲು ಆರೋಪಿಗಳು ಖೋಟಾ ನೋಟು ತಯಾರಿಸುವ ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಕಳೆದ ಮಾರ್ಚ್‌ನಲ್ಲೇ ಕಲರ್ ಪ್ರಿಂಟರ್ ಖರೀದಿಸಿ ನಕಲಿ ನೋಟು ಮುದ್ರಿಸಲು ಆರಂಭಿಸಿದ್ದರು. ಆದರೆ ನೋಟುಗಳು ಪರ್ಫೆಕ್ಟ್ ಆಗದ ಕಾರಣ ಚಲಾವಣೆಗೆ ತರಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಖಚಿತ ಮಾಹಿತಿ ಆಧರಿಸಿ ಪೊಲೀಸರು ಬಾಡಿಗೆ ಮನೆ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಒಂದು ಲಕ್ಷ ರೂಪಾಯಿ ನೀಡಿದರೆ ಎರಡು ಲಕ್ಷ ರೂಪಾಯಿ ವಾಪಸ್ ನೀಡುವುದಾಗಿ ಆಮಿಷವೊಡ್ಡಿ ಖೋಟಾ ನೋಟು ಚಲಾವಣೆಗೆ ತರುವ ಸಂಚು ರೂಪಿಸಿದ್ದರು ಎನ್ನಲಾಗಿದೆ. ಪರಾರಿಯಾಗಿರುವ ಅಶ್ವಿನ್ ಕುಮಾರ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

