ಹುಣಸೂರು: ವಿರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಲೆಕ್ಟ್ರಿಕ್ ಬಸ್‌ಗೆ ಹುಣಸೂರು-ಮೈಸೂರು ಹೆದ್ದಾರಿಯ ಮಧುಗಿರಿ ಕೊಪ್ಪಲು ಕ್ರಾಸ್ ಬಳಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಬಸ್‌ನ ಸಸ್ಪೆನ್ಷನ್ ಬಲೂನ್ ಬ್ಲಾಸ್ಟ್ ಆಗಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಹಾಗೂ ನಿರ್ವಾಹಕಿಯ ಸಮಯಪ್ರಜ್ಞೆಯಿಂದ 16 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಚಾಲಕ ರಾಮಚಂದ್ರ ಹಾಗೂ ನಿರ್ವಾಹಕಿ ಸುನಂದಮ್ಮ ಕೂಡಲೇ ಬಸ್‌ನ್ನು ರಸ್ತೆ ಬದಿಗೆ ನಿಲ್ಲಿಸಿ, ಪ್ರಯಾಣಿಕರನ್ನು ಲಗೇಜ್ ಸಮೇತ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಬಳಿಕ ಪ್ರಯಾಣಿಕರನ್ನು ಮತ್ತೊಂದು ಬಸ್‌ನಲ್ಲಿ ಬೆಂಗಳೂರಿಗೆ ಕಳುಹಿಸಲಾಯಿತು. ಬಸ್ ಹೊತ್ತಿ ಉರಿದ ಪರಿಣಾಮ ಹುಣಸೂರು-ಮೈಸೂರು ಹೆದ್ದಾರಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಬಿಳಿಕೆರೆ ಠಾಣೆ ಪೊಲೀಸರು ಬದಲಿ ಮಾರ್ಗದ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
bigtvnews | Hubli Dharwad News | Kannada News | Karnataka News Hubli News | News In Hubli | Local news

