ಹಾಸನದಲ್ಲಿ ಹಾಡಹಗಲೇ ಭೀಕರ ಕೊಲೆ ನಡೆದಿದ್ದು, ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಯುವಕನನ್ನು ದುಷ್ಕರ್ಮಿಯೊಬ್ಬ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಚನ್ನಪಟ್ಟಣ ವೃತ್ತದ ಸಮೀಪದ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಘಟನೆ ನಡೆದಿದ್ದು, ಹರಳಹಳ್ಳಿ ಗ್ರಾಮದ ಮಣಿ ಅಲಿಯಾಸ್ ಮಣಿಕಂಠ (35) ಮೃತ ಯುವಕ. ಮಣಿಕಂಠ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಹೆದ್ದಾರಿ ಪಕ್ಕದಲ್ಲಿ ದುಷ್ಕರ್ಮಿ ದಿಢೀರ್ ದಾಳಿ ನಡೆಸಿದ್ದಾನೆ. ಭಾರೀ ಗಾತ್ರದ ಕಲ್ಲನ್ನು ತಲೆ ಮೇಲೆ ಎತ್ತಿಹಾಕಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಣಿಕಂಠ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯ ಪತ್ತೆಗೆ ತಂಡ ರಚಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಭೀಕರ ಹತ್ಯೆಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

