ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಬಿ.ವಿ.ಗೀತಾ ಅವರನ್ನು ಅ.19ರವರೆಗೆ ಇ.ಡಿ. ಕಸ್ಟಡಿಗೆ ನೀಡಿ ವಿಶೇಷ ನ್ಯಾಯಾಲಯ ಆದೇಶಿಸಿದೆ. ಅಭ್ಯರ್ಥಿಗಳಿಂದ 10ರಿಂದ 20 ಲಕ್ಷ ರೂ. ಮುಂಗಡ ಪಡೆದು, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ನೀಡುವ ಮೂಲಕ ಹುದ್ದೆ ಕೊಡಿಸುವ ಅಕ್ರಮದಲ್ಲಿ ಇಬ್ಬರು ಭಾಗಿಯಾಗಿದ್ದಾರೆ ಎಂದು ಇ.ಡಿ. ಆರೋಪಿಸಿದೆ. ಇಬ್ಬರು ಆರೋಪಿಗಳು 6 ಅಭ್ಯರ್ಥಿಗಳಿಂದ ಉತ್ತರ ಸಹಿತ ಪ್ರಶ್ನೆಪತ್ರಿಕೆ ನೀಡಲು 70 ಲಕ್ಷ ರೂ. ಪಡೆದಿದ್ದಾರೆ. 2022ರಿಂದ 13 ಪರೀಕ್ಷೆಗಳಲ್ಲಿ ಅಕ್ರಮ ನಡೆದಿದ್ದು, ಪರೀಕ್ಷಾ ಕಂಟ್ರೋಲರ್ ಜ್ಞಾನೇಂದ್ರ ಕುಮಾರ್ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ ಎಂದು ಇ.ಡಿ. ನ್ಯಾಯಾಲಯಕ್ಕೆ ತಿಳಿಸಿದೆ. ಇದಕ್ಕೆ ಆಕ್ಷೇಪಿಸಿದ ಶಿವಶಂಕರಪ್ಪ ಪರ ವಕೀಲರು, ಪರೀಕ್ಷಾ ಪ್ರಕ್ರಿಯೆ ಕಂಟ್ರೋಲರ್ ಅಧೀನದಲ್ಲಿದ್ದು, ತಮ್ಮ ಕಕ್ಷಿದಾರರು ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ವಾದಿಸಿದರು. ವಾದ ಆಲಿಸಿದ ನ್ಯಾಯಾಲಯ, ಇಬ್ಬರನ್ನೂ 13 ದಿನಗಳ ಕಾಲ ಇ.ಡಿ. ವಶಕ್ಕೆ ನೀಡಿ, ಸೂಕ್ತ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಮಾತ್ರೆಗಳನ್ನು ನೀಡುವಂತೆ ಸೂಚಿಸಿತು. ನವರಾತ್ರಿ ಉಪವಾಸಕ್ಕೆ ಗೀತಾ ಮಾಡಿದ ಮನವಿಯನ್ನೂ ನ್ಯಾಯಾಲಯ ನಿರಾಕರಿಸಿದೆ. ಯಾವುದೇ ನೋಟಿಸ್ ನೀಡದೆ ಬಂಧಿಸಲಾಗಿದೆ ಎಂದು ಶಿವಶಂಕರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

