ಬೆಳಗಾವಿ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಮತ್ತಷ್ಟೂ ಹೋರಾಟ ತೀವ್ರಗೊಂಡಿದೆ. ನಾಳೆ ರಾಜ್ಯಾದ್ಯಂತ ರಸ್ತೆ ತಡೆದು ಪ್ರತಿಭಟನೆ ಮಾಡುವಂತೆ ಪಂಚಮಸಾಲಿ ಸಮುದಾಯದವರಿಗೆ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿನ್ನೆ ಸುವರ್ಣಸೌಧದಲ್ಲಿ ಹೋರಾಟ ನಿರತರ ಮೇಲೆ ಪೊಲೀಸರೇ ಸಿವಿಲ್ ಡ್ರೆಸ್ ಧರಿಸಿ ಹಲ್ಲೆ ನಡೆಸಿದ್ದಾರೆ.
ದ್ವೇಷದಿಂದ ಕಲ್ಲು ಹೊಡೆಯುವ ಕೆಲಸ ಮಾಡಿದ್ದು, ಹೋರಾಟವನ್ನು ಪೂರ್ವಗ್ರಹ ಪೀಡಿತರಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಹೃದಯಕ್ಕೆ ಚುಚ್ಚುವಂತೆ ಹೊಡೆದಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು. ಅಲ್ಲದೇ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಲಾಠಿ ಬೀಸಿದವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ನಾಳೆ ಹಿರೇಬಾಗೇವಾಡಿ ಟೋಲ್ ನಾಕಾ ಬಂದ್ ಮಾಡಲಾಗುತ್ತಿದ್ದು, ಯಾವುದೇ ಕಾರಣಕ್ಕೆ ನಮ್ಮ ಹೋರಾಟ ವನ್ನು ನಿಲ್ಲಿಸುವುದಿಲ್ಲ. ನಿಮ್ಮ-ನಿಮ್ಮ ಊರಲ್ಲಿ ರಸ್ತೆ ತಡೆಯುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ.
ನಮ್ಮ ಸಮುದಾಯದ ಹೋರಾಟವನ್ನು ಸರ್ಕಾರ ಹತ್ತಿಕ್ಕುತ್ತಿದ್ದು, ಇನ್ಮುಂದೆ ನಾವು ಶಾಂತ ರೀತಿಯಲ್ಲಿ ಹೋರಾಡಲ್ಲ, ಕ್ರಾಂತಿಯ ಹೋರಾಟ ನಡೆಸುತ್ತೇವೆ. ಲಾಠಿ ಚಾರ್ಜ್ ಬೆಳವಣಿಗೆ ನೋಡುತ್ತಿದ್ದರೆ ಸಿಎಂ ಸಿದ್ದರಾಮಯ್ಯ ಅವರು ಲಿಂಗಾಯತ ವಿರೋಧಿ ಎಂದು ಈಗ ಅರ್ಥವಾಗುತ್ತಿದೆ ಎಂದು ದೂರಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





