ಬೆಂಗಳೂರು: ತಾಯಿಯ ಸಾವನ್ನು ಸಹಜ ಸಾವು ಎಂದು ಬಿಂಬಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದ ಮಗನ ಕೃತ್ಯ ಮರಣೋತ್ತರ ಪರೀಕ್ಷೆಯಿಂದ ಬಯಲಾಗಿದೆ. ಕಾಡುಗೋಡಿಯ ಬೇವಿನಮರ ಕಾಲೋನಿಯಲ್ಲಿ ಸೆ.24ರಂದು 60 ವರ್ಷದ ಭಾಗ್ಯಮ್ಮ ಮೃತಪಟ್ಟಿದ್ದರು. ಮಂಚದಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದರೂ, ಪೊಲೀಸರಿಗೆ ಅನುಮಾನ ಮೂಡಿ ಅಂತ್ಯಕ್ರಿಯೆ ತಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ವರದಿಯಲ್ಲಿ ತಲೆಗೆ ಗಂಭೀರ ಗಾಯವಾಗಿದ್ದು, ದೇಹದ 12 ಕಡೆ ಗಾಯಗಳಾಗಿರುವುದು ಪತ್ತೆಯಾಗಿದೆ. ಬಳಿಕ ಅಕ್ಕಪಕ್ಕದವರ ವಿಚಾರಣೆಯಲ್ಲಿ ಘಟನೆಗೂ ಮುನ್ನ ಮನೆಯಲ್ಲಿ ಗಲಾಟೆ ನಡೆದಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಭಾಗ್ಯಮ್ಮ ಅವರ ಮೂರನೇ ಪುತ್ರ ಬಾಲಾಜಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾಯಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾಗ್ಯಮ್ಮ ಅವರ ಚಿನ್ನವನ್ನು ಅಡಮಾನ ಇಟ್ಟಿದ್ದ ವಿಚಾರದಲ್ಲಿ ತಾಯಿ ಪದೇಪದೇ ಚಿನ್ನ ಬಿಡಿಸುವಂತೆ ಕೇಳುತ್ತಿದ್ದದ್ದು, ಅವರ ವರ್ತನೆ ಹಾಗೂ ಮನೆ ಬಳಿ ವ್ಯಕ್ತಿಯೊಬ್ಬ ಬರುತ್ತಿದ್ದ ಬಗ್ಗೆ ಉಂಟಾದ ಕೋಪದಿಂದ ಹಲ್ಲೆ ನಡೆಸಿದ್ದಾಗಿ ಬಾಲಾಜಿ ಹೇಳಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಾಜಿಯನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

