ಮೈಸೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣ ಕಳೆದುಕೊಂಡು ಸಾಲ ಮಾಡಿಕೊಂಡಿದ್ದ ಯುವಕನೊಬ್ಬ, ಸ್ವಂತ ದೊಡ್ಡಮ್ಮನ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಸರ ದೋಚಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಕುವೆಂಪು ನಗರ ಪೊಲೀಸರು ಕೇವಲ 6 ಗಂಟೆಯೊಳಗೆ ಆರೋಪಿ ರಜತ್ (24) ಎಂಬಾತನನ್ನು ಬಂಧಿಸಿದ್ದಾರೆ. ಅಕ್ಟೋಬರ್ 30ರಂದು ಮನೆಯಲ್ಲಿ ಒಬ್ಬರೇ ಇದ್ದ 69 ವರ್ಷದ ಲೀಲಾವತಿ ಅವರ ಮನೆಗೆ ಹೆಲ್ಮೆಟ್ ಧರಿಸಿ ನುಗ್ಗಿದ ಆರೋಪಿ, ಅವರ ಕಣ್ಣಿಗೆ ಖಾರದ ಪುಡಿ ಎರಚಿ 60 ಗ್ರಾಂ ತೂಕದ ಮಾಂಗಲ್ಯ ಸರ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಜಟಾಪಟಿ ನಡೆದು ಸರ ತುಂಡಾಗಿದ್ದು, 30 ಗ್ರಾಂ ಚಿನ್ನವನ್ನು ದೋಚಿ ಪರಾರಿಯಾಗಿದ್ದ. ಬಿ.ಕಾಂ ಪದವೀಧರನಾಗಿದ್ದ ರಜತ್ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ನಷ್ಟ ಅನುಭವಿಸಿ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ದೊಡ್ಡಮ್ಮನ ಸರ ಕದಿಯಲು ಸಂಚು ರೂಪಿಸಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಪೊಲೀಸರು 30 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
