ಛತ್ತೀಸ್‌ಗಢದ ಜಶಪುರ ಜಿಲ್ಲೆಯಲ್ಲಿ ನಾಲ್ಕು ವರ್ಷದ ಬಾಲಕನನ್ನು ಕೊಲೆ ಮಾಡಿ ಅಂಗಾಂಗಗಳನ್ನು ಹೊರತೆಗೆದಿರುವ ಭೀಕರ ಘಟನೆ ನಡೆದಿದೆ. ನಾಪತ್ತೆಯಾಗಿದ್ದ ಜಿತೇಂದ್ರ ರಾಮ್ ಎಂಬ ಬಾಲಕನ ಮೃತದೇಹ ಚೀಲದಲ್ಲಿ ತುಂಬಿದ ಸ್ಥಿತಿಯಲ್ಲಿ ಹೊಲದ ನೀರಿನ ಗುಂಡಿಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 27 ವರ್ಷದ ಬಸುದೇವ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಸುದೇವ್ ಮೃತ ಬಾಲಕನ ಸಂಬಂಧಿಯಾಗಿದ್ದು, ಸಾಮಾಜಿಕ ಜಾಲತಾಣಗಳಿಂದ ಪ್ರಭಾವಿತನಾಗಿ ಅಂಗಾಂಗಗಳನ್ನು ಮಾರಾಟ ಮಾಡಿ ಹಣ ಗಳಿಸಲು ಸಂಚು ರೂಪಿಸಿದ್ದ ಎನ್ನಲಾಗಿದೆ. ನವೆಂಬರ್ 5ರಂದು ಬಾಲಕನನ್ನು ಕರೆದೊಯ್ದು ಮದ್ಯಪಾನ ಮಾಡಿಸಿ, ಬಳಿಕ ಚಾಕುವಿನಿಂದ ಕೊಲೆ ಮಾಡಿ ಅಂಗಾಂಗಗಳನ್ನು ಹೊರತೆಗೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಮಾಹಿತಿ ಮೇರೆಗೆ ಪೊಲೀಸರು ಕೊಲೆಗೆ ಬಳಸಿದ ಆಯುಧ, ಅಂಗಾಂಗಗಳಿದ್ದ ಪ್ಲಾಸ್ಟಿಕ್ ಬಕೆಟ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

