ಚಿಕ್ಕೋಡಿ: ತನ್ನ ಮಗಳು ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಲು ಸಹಾಯ ಮಾಡಿದ್ದಾನೆ ಎಂಬ ಆಕ್ರೋಶದಿಂದ ತಂದೆಯೊಬ್ಬ ಜ್ಯೋತಿಷಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾನಕಾಪುರದಲ್ಲಿ ನಡೆದಿದೆ. ಮಹಾರಾಷ್ಟ್ರದ ಮಂದಾರ್ ರಾಂಡೆ (35) ಕೊಲೆಯಾದ ಜ್ಯೋತಿಷಿ. ಆರೋಪಿ ದೀಪಕ್ ಮುಕ್ಕಮ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಮಗಳು ಅನುಜಾ, ಓಂಕಾರ್ ಖೋತ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇವರ ಪ್ರೇಮ ವಿವಾಹಕ್ಕೆ ಜ್ಯೋತಿಷಿ ಮಂದಾರ್ ಮಧ್ಯಸ್ಥಿಕೆ ವಹಿಸಿ ಸಹಾಯ ಮಾಡಿದ್ದರು. ಇದರಿಂದ ಕೋಪಗೊಂಡ ದೀಪಕ್, ಮತ್ತೊಂದು ಮದುವೆಯ ವಿಚಾರವಿದೆ ಎಂದು ನಂಬಿಸಿ ಅ.31ರಂದು ಜ್ಯೋತಿಷಿಯನ್ನು ಮಾನಕಾಪುರಕ್ಕೆ ಕರೆಸಿಕೊಂಡಿದ್ದನು. ಸ್ಥಳಕ್ಕೆ ಬಂದ ಜ್ಯೋತಿಷಿಯ ಕಣ್ಣಿಗೆ ಖಾರದ ಪುಡಿ ಎರಚಿ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು. ಅಪರಿಚಿತ ಶವ ಪತ್ತೆಯಾದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸದಲಗಾ ಪೊಲೀಸರು ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
