ಬೆಂಗಳೂರು: ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮತ್ತೆರಡು ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ. ಅವುಗಳನ್ನು ಶಿವಕುಮಾರ್ ಮತ್ತು ದಿವ್ಯಾ ದಂಪತಿಯ ಮೃತದೇಹಗಳೆಂದು ಗುರುತಿಸಲಾಗಿದೆ. ಇದರೊಂದಿಗೆ ಐದು ಮೃತದೇಹಗಳು ಪತ್ತೆಯಾಗಿದ್ದು, ಇನ್ನಿಬ್ಬರ ಶವಕ್ಕಾಗಿ ಶಿರಾಡಿ ಘಾಟ್‌ನಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಮೃತದೇಹಗಳನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ, ಹಗ್ಗದಿಂದ ಬಿಗಿದು ಗೋಣಿಚೀಲದಲ್ಲಿ ಎಸೆಯಲಾಗಿತ್ತು. ಈಗಾಗಲೇ ನಂದಿ ಬೆಟ್ಟದಲ್ಲಿ ಬಾಲಕ ಪುನೀತ್ ಹಾಗೂ ಏರ್ಕಾಡ್ ಅರಣ್ಯ ಪ್ರದೇಶದಲ್ಲಿ ಸುನಿತಾ ಮತ್ತು ರೂಪವತಿ ಅವರ ಮೃತದೇಹಗಳು ಪತ್ತೆಯಾಗಿವೆ. ಉಳಿದ ಶಂಕರ್ ಮತ್ತು ನಳಿನಿ ಅವರ ಶವಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿ ಇಂದುಶೇಖರ್ ಕ್ರೈಂ ಸಿನಿಮಾಗಳು ಹಾಗೂ ಇಂಟರ್‌ನೆಟ್‌ನಿಂದ ಪ್ರಭಾವಿತನಾಗಿ ಹತ್ಯೆಗೆ ಸಂಚು ರೂಪಿಸಿದ್ದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ನಿದ್ರೆ ಮಾತ್ರೆ ಹಾಕಿದ ಊಟ ನೀಡಿ, ಬಳಿಕ ರುಬ್ಬುಗಲ್ಲಿನಿಂದ ಹತ್ಯೆ ಮಾಡಿ ಶವಗಳನ್ನು ಕಾರಿನಲ್ಲಿ ಸಾಗಿಸಿ ವಿವಿಧೆಡೆ ಎಸೆದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
