ತುಮಕೂರು: ಮದುವೆಗೆ ಸಿದ್ಧತೆ ನಡೆದಿದ್ದ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ಮದುವೆ ಬೇಡವೆಂದು ಮಾತ್ರೆ ನುಂಗಿ ಆಸ್ಪತ್ರೆಗೆ ದಾಖಲಾದ ಘಟನೆ ಆಂಧ್ರಪ್ರದೇಶದ ಮಡಕಶಿರಾದಲ್ಲಿ ನಡೆದಿದೆ. ಪಾವಗಡ ಪೊಲೀಸ್ ಠಾಣೆಯ ಸಿಬ್ಬಂದಿ ಸಂಪತ್ ಎಂಬಾತನಿಗೆ ಆಂಧ್ರ ಮೂಲದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಅರಿಶಿನ ಶಾಸ್ತ್ರ, ಮೆಹಂದಿ ಶಾಸ್ತ್ರ ಮುಗಿದು ಆರತಕ್ಷತೆಗೆ ಸಿದ್ಧತೆ ನಡೆದಿದ್ದ ವೇಳೆ ಸಂಪತ್ ಮದುವೆಯಾಗುವುದಿಲ್ಲ ಎಂದು ಹೇಳಿ ಮಾತ್ರೆ ನುಂಗಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎರಡೂ ಕುಟುಂಬದವರು ಆತಂಕಕ್ಕೊಳಗಾಗಿದ್ದಾರೆ. ರಾತ್ರಿಯಿಡೀ ನಡೆದ ಹೈಡ್ರಾಮಾದ ಬಳಿಕ ಬೆಳಗ್ಗೆ ಚೇತರಿಸಿಕೊಂಡ ಸಂಪತ್ ಮದುವೆಗೆ ಒಪ್ಪಿಕೊಂಡಿದ್ದಾನೆ. ಹಿರಿಯರ ಮನವೊಲಿಕೆಯ ನಂತರ ಮಡಕಶಿರಾದ ಆಂಜನೇಯ ದೇವಸ್ಥಾನದಲ್ಲಿ ಯುವತಿಗೆ ತಾಳಿ ಕಟ್ಟಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

