ಹುಬ್ಬಳ್ಳಿ:ಧಾರವಾಡ ಕಟ್ಟಡ ದುರಂತದ ಬಳಿಕವೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಾಣಿಸುತ್ತಿಲ್ಲ. ಪಾಲಿಕೆಗೆ ಸೇರಿದ ಕಟ್ಟಡವೊಂದು ಜಿಲ್ಲೆಯ ಜನನಿಬಿಡ ಪ್ರದೇಶದಲ್ಲಿದ್ದು, ಎಲ್ಲೆಂದರಲ್ಲಿ ಬಿರುಕು ಬಿಟ್ಟು ಬಲಿಗಾಗಿ ಕಾದು ಕುಳಿತಿದೆ.ಧಾರವಾಡ ಕಟ್ಟಡ ದುರಂತ 19 ಜನರ ಪ್ರಾಣ ಬಲಿ ತಗೆದುಕೊಂಡಿದೆ. ಈ ಘಟನೆ ನಂತರ ದುಸ್ಥಿತಿಯಲ್ಲಿರುವ ಕಟ್ಟಡಗಳನ್ನು ಗುರುತಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಆದರೆ ಇದ್ಯಾವುದಕ್ಕೂ ಅಧಿಕಾರಿಗಳು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನಗರದ ಮ್ಯಾಗೇರ ಓಣಿಯಲ್ಲಿ ಕಳೆದ 50-60 ವರ್ಷಗಳ ಹಿಂದೆ ಮಹಾನಗರ ಪಾಲಿಕೆಯವರು ವಾಣಿಜ್ಯ ಮಳಿಗೆಯನ್ನ ಕಟ್ಟಿದ್ದರು.ಕಟ್ಟಡದಲ್ಲಿರುವ 20ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಇದು ಎಲ್ಲೆಂದರಲ್ಲಿ ಬಿರುಕು ಬಿಟ್ಟಿದೆ. ಜೊತೆಗೆ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿದೆ. ಇನ್ನು ಇದು ಜನನಿಬಿಡ ಪ್ರದೇಶವಾಗಿದ್ದು, ಸಾವಿರಾರು ಜನರು ದಿನನಿತ್ಯ ಇಲ್ಲಿ ಓಡಾಡುತ್ತಾರೆ. ಕಟ್ಟಡದ ದುಸ್ಥಿತಿಯನ್ನ ಕಂಡು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅನಾಹುತ ತಪ್ಪಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





