ಬೆಂಗಳೂರು(ಸೆಪ್ಟೆಂಬರ್.15): ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿಗರನ್ನು ಕೊತ್ತನೂರು ಪೊಲೀಸರು ಬಂಧಿಸಿದ್ಧಾರೆ. ನೈಜೀರಿಯಾ ಹಾಗೂ ಉಗಾಂಡ ಮೂಲದ ಚುವಾನ್ಸೋ , ಡಾನ್ ಕೆ ಥಾಮಸ್ , ಲೂಥಾಯ ಪ್ಯಾಟ್ರಿಕ್ , ಸಬಾಸಿಯೋ ಬಂಧಿತ ಆರೋಪಿಗಳು ಎನ್ನಲಾಗಿದೆ.
ಉಗಾಂಡ ಮೂಲದ ವಿದೇಶಿಗರು ಬೆಂಗಳೂರಿಗೆ ಬಂದು ನೆಲೆಸಿದ್ದರು. ಹಲವು ದಿನಗಳಿಂದ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು, ಮಾದಕ ವಸ್ತುಗಳ ಮಾರಟ ಮಾಡುತ್ತಿದ್ದರು. ಕೊತ್ತನೂರು ಪೊಲೀಸರ ಕಾರ್ಯಾಚರಣೆಯಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟ ವಿಚಾರ ಬಯಲಿಗೆ ಬಂದಿದೆ.
ಇನ್ನು ಆರೋಪಿಗಳಿಂದ 1 ಕೆಜಿ ಗಾಂಜ, 25 ಗ್ರಾಂ ಚರಸ್ , 244 MDMA ಟ್ಯಾಬ್ಲೇಟ್ಸ್ , ಮತ್ತು ವೀಡ್ ಆಯಿಲ್ ಡಬ್ಬ , 3 ಮೊಬೈಲ್ , ಒಂದು ಪಲ್ಸರ್ ಬೈಕ್ ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ಗಾಂಜಾ, ಫನ್ನಿ ಅಂಬುವ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಹಿಂದೆಯೂ ಕೂಡ ಪೊಲೀಸ್ ಇಲಾಖೆ ಮಾದಕ ವಸ್ತುಗಳ ಸೇವನೆ ವಿರುದ್ಧ ಕಟ್ಟೆಚ್ಚರ ವಹಿಸಲು ಸಿದ್ದತೆ ನಡೆಸಿಕೊಂಡಿತ್ತು. ಈ ಕಾರಣಕ್ಕಾಗಿಯೇ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಮಾದಕವಸ್ತುಗಳ ಸೇವನೆ ತಡೆಗೆ ಕಠಿಣ ಕ್ರಮ ಕೈಗೊಳ್ಳಲು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲಾಗಿತ್ತು.
ಅಬಕಾರಿ ಇಲಾಖೆ ಅಧಿಕಾರಿಗಳ ಜತೆಗೆ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ವಿಶೇಷ ಸಭೆ ನಡೆಸಿತ್ತು. ಅಧಿಕಾರಿಗಳಿಗೆ ಮಾದಕ ವಸ್ತು ಪತ್ತೆ ಮತ್ತು ನಿಯಂತ್ರಣ ಕುರಿತಂತೆ ವೃತ್ತಿಪರ ತರಬೇತಿ ಕೊಡಿಸಲಾಯ್ತು. ತರಬೇತಿಯಿಂದ ಪರಿಣಾಮಕಾರಿಯಾಗಿ ಮಾದಕ ವಸ್ತುಗಳ ನಿಯಂತ್ರಣ ಮಾಡಬಹುದು ಎನ್ನುತ್ತಿವೆ ಮೂಲಗಳು.
ದೇಶದಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಪರಿಣಾಮಕಾರಿ ಜಾರಿಗೊಳ್ಳದ ಕಾರಣ ಪ್ರತಿವರ್ಷ ಲಕ್ಷಾಂತರ ಮಕ್ಕಳು ಡ್ರಗ್ಸ್‌ಗೆ ಬಲಿಯಾಗುತ್ತಿದ್ದಾರೆ. ರಾಜ್ಯದಲ್ಲೂ ಕೂಡ ಅಬಕಾರಿ ಇಲಾಖೆಯ ಜವಾಬ್ದಾರಿಯಾಗಿರುವ ಮಾದಕ ವಸ್ತು ನಿಯಂತ್ರಣ ಕೆಲಸವು ಸಮರ್ಪಕವಾಗಿ ನಡೆಯುತ್ತಿಲ್ಲ.
ಅಬಕಾರಿ ಇಲಾಖೆ ಎಂದರೆ ಕೇವಲ ಸರ್ಕಾರಕ್ಕೆ ಮದ್ಯ ಮಾರಾಟದ ಮೂಲಕ ಆದಾಯ ತರುವ ಇಲಾಖೆ ಎಂಬಂತಾಗಿದೆ. ಆದರೆ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಮಾದಕ ವಸ್ತು ನಿಯಂತ್ರಣ ಕಾಯ್ದೆ ಅನುಷ್ಠಾನಗೊಳಿಸುವ ಮಹತ್ವದ ಹೊಣೆ ಅಬಕಾರಿ ಇಲಾಖೆ ಮೇಲಿದೆ ಎನ್ನುವುದು ವಾಸ್ತವ.
bigtvnews | Hubli Dharwad News | Kannada News | Karnataka News Hubli News | News In Hubli | Local news





