ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಬಹುಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಿ, ವಜ್ರ ಉದ್ಯಮಿ ನೀರವ್ ಮೋದಿಗೆ ಇಡಿ ಶಾಕ್ ಕೊಟ್ಟಿದೆ. ನೀರವ್ ಮೋದಿಗೆ ಸೇರಿದ ಭಾರತದ ಹಾಗೂ ವಿದೇಶದಲ್ಲಿರುವ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ನ್ಯೂಯಾರ್ಕ್ನಲ್ಲಿರುವ ಐಷಾರಾಮಿ ಅಪಾರ್ಟ್ಮೆಂಟ್, ವಜ್ರದ ಉಂಗುರಗಳು, ಚಿನ್ನದ ಬಳೆಗಳು ಸೇರಿದಂತೆ ಸುಮಾರು ₹637 ಕೋಟಿ ಮೌಲ್ಯದ ಆಭರಣಗಳನ್ನ ಸೀಜ್ ಮಾಡಲಾಗಿದೆ.
ಅಕ್ರಮ ಹಣ ಸಂಗ್ರಹ ತಡೆ ಕಾಯ್ದೆಯ(ಪ್ರಿವೆಂನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್) ಸೆಕ್ಷನ್ 5ರಡಿ ಸುಮಾರು 216 ಕೋಟಿ ಮೊತ್ತದ ಎರಡು ಸ್ಥಿರಾಸ್ತಿಗಳನ್ನ ಇಡಿ ಜಪ್ತಿ ಮಾಡಿದೆ. ಹಾಗೇ 278 ಕೋಟಿ ಹಣವಿರುವ 5 ಓವರ್ಸೀಸ್ ಬ್ಯಾಂಕ್ ಅಕೌಂಟ್ ಜಪ್ತಿಯಾಗಿದೆ. ₹22.69 ಕೋಟಿ ಮೊತ್ತದ ವಜ್ರದ ಉಂಗುರಗಳನ್ನು ಹಾಂಗ್ಕಾಂಗ್ನಿಂದ ಭಾರತಕ್ಕೆ ತರಲಾಗಿದೆ. ದಕ್ಷಿಣ ಮುಂಬೈನ 19.5 ಕೋಟಿ ಮೌಲ್ಯದ ಫ್ಲಾಟ್ ಕೂಡ ಸೀಜ್ ಮಾಡಲಾಗಿದೆ.
ಕ್ರಿಮಿನಲ್ ಪ್ರಕರಣದಲ್ಲಿ ಭಾರತೀಯ ಸಂಸ್ಥೆಯು ವಿದೇಶಿ ಆಸ್ತಿಯನ್ನು ಜಪ್ತಿ ಮಾಡಿರುವ ಪ್ರಕರಣಗಳು ತುಂಬಾ ಕಡಿಮೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಆದಿತ್ಯ ನಾನಾವತಿ ವಿರುದ್ಧ ಇಂಟರ್ಪೋಲ್ನಿಂದ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಬರೋಬ್ಬರಿ ₹12,600 ಕೋಟಿ ಹಣ ವಂಚನೆಯ ಆರೋಪ ಎದುರಿಸುತ್ತಿರುವ ನೀರವ್ ಮೋದಿ ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ
bigtvnews | Hubli Dharwad News | Kannada News | Karnataka News Hubli News | News In Hubli | Local news





