ನವದೆಹಲಿ: ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬರಬೇಕು ಎಂದು ಭಾರತ ನೀಡಿದ ಆಮಂತ್ರಣವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಆಗಸ್ಟ್ನ ಆರಂಭದಲ್ಲಿ, ಟ್ರಂಪ್ಗೆ ಭಾರತಕ್ಕೆ ಬರಲು ಆಮಂತ್ರಣ ನೀಡಿರುವುದನ್ನ ವೈಟ್ ಹೌಸ್ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ದೃಢಪಡಿಸಿದ್ದರು. ಆಮಂತ್ರಣ ನೀಡಿರುವುದು ನನಗೆ ಗೊತ್ತಿದೆ. ಆದ್ರೆ ಈ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಕೈಗೊಂಡಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ವಿದೇಶಾಂಗ ಸಚಿವಾಲಯ ಯಾವುದೇ ಹೇಳಿಕೆ ನೀಡಿಲ್ಲ. ದೆಹಲಿಯಲ್ಲಿರುವ ಅಮೆರಿಕಾ ರಾಯಭಾರಿ ಪ್ರತಿಕ್ರಿಯಿಸಿ, ಅಧ್ಯಕ್ಷರ ಪ್ರಯಾಣದ ಪ್ಲಾನ್ಗಳ ಬಗ್ಗೆ ವೈಟ್ ಹೌಸ್ ಮಾತ್ರ ಹೇಳಿಕೆ ನೀಡಬೇಕು ಎಂದು ಹೇಳಿದ್ದಾರೆ.
ಟ್ರಂಪ್ ಭಾರತದ ಆಮಂತ್ರಣವನ್ನು ನಿರಾಕರಿಸಿರುವುದು ಎರಡು ದೇಶಗಳ ನಡುವಿನ ಸಂಬಂಧಗಳ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತ ಇತ್ತಿಚೇಗೆ ರಷ್ಯಾದೊಂದಿಗೆ S-400 ಕ್ಷಿಪಣಿ ವ್ಯವಸ್ಥೆಯ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ವೇಳೆ ಭಾರತಕ್ಕೆ ಅಮೆರಿಕಾ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿಯೇ ಆಮಂತ್ರಣವನ್ನು ತಿರಸ್ಕರಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೇ ಇರಾನ್ನಿಂದ ಕಚ್ಛಾ ತೈಲ ಆಮದು ಮಾಡಿಕೊಳ್ಳಬಾರದು ಎಂದು ಅಮೆರಿಕಾ ಭಾರತವನ್ನು ಬೆದರಿಸುತ್ತಿದ್ದರೂ ಭಾರತ ಇರಾನ್ನಿಂದಲೇ ಕಚ್ಛಾ ತೈಲ ಆಮದು ಮುಂದುವರೆಸಿದೆ. ಇದೂ ಕೂಡ ಟ್ರಂಪ್ ಭಾರತದ ಆಮಂತ್ರಣ ತಿರಸ್ಕರಿಸಲು ಕಾರಣವಾಯಿತಾ ಎಂದು ಕೂಡ ಚರ್ಚೆಯಾಗ್ತಿದೆ.
ಇನ್ನು ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಾರದ್ದಕ್ಕೆ ಟ್ರಂಪ್ ಬೇರೆಯದ್ದೇ ಕಾರಣ ನೀಡಿದ್ದಾರೆ ಎನ್ನಲಾಗಿದೆ. ಆ ದಿನಾಂಕದಂದು ಅಧ್ಯಕ್ಷ ಟ್ರಂಪ್ಗೆ ಬೇರೆ ಕಾರ್ಯಕ್ರಮ ನಿಗದಿಯಾಗಿದೆ. ಅವರು ಸ್ಟೇಟ್ ಆಫ್ ದಿ ಯುನಿಯನ್ ಅಡ್ರೆಸ್ ಸಮಾರಂಭಕ್ಕೆ ಹೋಗಬೇಕಾಗಿದೆ. ಅದಕ್ಕಾಗಿಯೇ ಆಮಂತ್ರಣವನ್ನು ತಿರಸ್ಕರಿಸಿದ್ದಾರೆ ಎಂದು ತಿಳಿಸಲಾಗಿದೆ. 2015ರಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಗಣರಾಜ್ಯೋತ್ಸವದ ದಿನ ಭಾರತಕ್ಕೆ ಭೇಟಿ ನೀಡಿದಾಗ SOTU ಸಮಾರಂಭದ ದಿನಾಂಕವನ್ನು ಮುಂದೂಡಲಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





