ಬೆಂಗಳೂರು: ಜಾತ್ಯತೀತ ಜನತಾದಳದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಎರಡು ದಿನಗಳ ಕಾಲ (ಅ.27-28) ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಇಂದಿಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಕಾರ್ಯಕಾರಿಣಿ ಸಭೆಯಲ್ಲಿ ಕರ್ನಾಟಕವೂ ಸೇರಿ 13 ರಾಜ್ಯಗಳಿಂದ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಭಾಗಿಯಾಗಲಿದ್ದಾರೆ ಎಂದರು.
ಈ ಕಾರ್ಯಕಾರಣಿ ಸಭೆಯಲ್ಲಿ ರಾಷ್ಟ್ರದ ರಾಜ್ಯದ ರಾಜಕೀಯ ಬೆಳವಣಿಗೆ, ಆರ್ಥಿಕ ವಿಚಾರಗಳು, ಕೋಮು ಸಂಘರ್ಷದ ವಿಷಯಗಳ ವಿಚಾರವಾಗಿ ಚರ್ಚೆ ನಡೆಸಲಾಗುವುದು. ಎರಡೂ ದಿನಗಳ ಸಭೆಯಲ್ಲಿ ಕೆಲ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಎಂದು ಅವರು ಹೇಳಿದರು.
ಪಂಚರತ್ನ ರಥಯಾತ್ರೆಗೆ ಅಂತಿಮ ತಯಾರಿ : ನವೆಂಬರ್ 1 ರಂದು ಪಂಚರತ್ನ ಯೋಜನೆ ಪ್ರಾರಂಭ ಆಗಲಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರಥಯಾತ್ರೆಯನ್ನು ಆರಂಭ ಮಾಡಲಾಗುವುದು. ಅದಕ್ಕೂ ಮೊದಲು ಗುರುವಾರ ಬೆಳಗ್ಗೆ ಬೆಂಗಳೂರಿನ ಗವಿಗಂಗಾಧರ ದೇವಸ್ಥಾನದಲ್ಲಿ ಒಂದು ರಥಕ್ಕೆ ಪೂಜೆ ನಡೆಸಲಾಗುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

