ಬೆಂಗಳೂರು: ‘ಮುಂದಿನ ಚುನಾವಣೆಗೆ ಕ್ಷೇತ್ರ ಹುಡುಕಲು ಇಷ್ಟೊಂದು ಕಸರತ್ತು ನಡೆಸುತ್ತಿರುವ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ಪರಿಸ್ಥಿತಿ ನೋಡಿದರೆ, ಯಾವ ಕ್ಷೇತ್ರದಲ್ಲಿ ನಿಂತರೂ ಡಿ.ಕೆ.ಶಿವಕುಮಾರ್ ಸೋಲಿಸುತ್ತಾರೆ ಎಂಬ ಭಯ ಕಾಡುತ್ತಿರುವ ಹಾಗಿದೆ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕಳೆದ ಚುನಾವಣೆಯಲ್ಲಿ ಗೆಲ್ಲಿಸಿ ಮಾನ ಕಾಪಾಡಿದ ಬಾದಾಮಿ ಕ್ಷೇತ್ರದ ಜನತೆಗೆ ಕೈ ಕೊಡುವುದು ಜನನಾಯಕನ ಲಕ್ಷಣವೇ? ರಾಜಕೀಯ ಸಂದಿಗ್ಧ ಕಾಲದಲ್ಲಿ ಮಾನ ಕಾಪಾಡಿದ ಜನತೆಗಿಂತ ಮುಂದಿನ ಚುನಾವಣೆ ಗೆಲ್ಲುವುದೇ ಸಿದ್ದರಾಮಯ್ಯ ಅವರಿಗೆ ಮುಖ್ಯವಾಯಿತೇ?’ ಎಂದು ಖಾರವಾಗಿ ಪ್ರಶ್ನಿಸಿದೆ.
‘ಸಿದ್ದರಾಮಯ್ಯ ಅವರೇ, ನೀವು ನಿಜವಾದ ಜನಪರ ನಾಯಕರಾದರೆ ಬಾದಾಮಿ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಿ ಆ ಜನರ ಋಣ ತೀರಿಸಿ. ಬಾದಾಮಿ ಕ್ಷೇತ್ರದ ಮತದಾರರ ಮೇಲೆ ಅನುಮಾನ ಪಟ್ಟು ಅವರಿಗೆ ಅವಮಾನ ಮಾಡುತ್ತಿರುವುದು ಎಷ್ಟು ಸರಿ?’ ಎಂದು ಬಿಜೆಪಿ, ಸಿದ್ಧರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.