ಉಡುಪಿ: ಜಿಲ್ಲಾ ಪಶುಪಾಲನಾ ಇಲಾಖೆಯಲ್ಲಿ ಶೇ.80 ರಷ್ಟು ಹುದ್ದೆಗಳು ವರ್ಷಕ್ಕೂ ಅಧಿಕ ಕಾಲದಿಂದ ಖಾಲಿ ಬಿದ್ದಿದ್ದು, ಇನ್ನು ಕೂಡ ಪೂರ್ಣ ಪ್ರಮಾಣದಲ್ಲಿ ನೇಮಕಾತಿ ನಡೆದಿಲ್ಲ.
ಜಿಲ್ಲಾದ್ಯಂತ ಬೀದಿ ನಾಯಿಗಳ ಹಾವಳಿ ಸಹಿತ ಪಶುಗಳು ವಿವಿಧ ರೋಗಗಳಿಗೆ ತುತ್ತಾಗುವ ಬಗ್ಗೆ ಸ್ಥಳೀಯಾ ಡಳಿತ ನಡೆಸುವ ಸಭೆಗಳಲ್ಲಿ ಚರ್ಚೆಗಳು ಆಗುತ್ತಿದ್ದು, ಸಿಬ್ಬಂದಿಯ ಸಂಖ್ಯೆ ಇಲ್ಲದ ಹೊರತು ಯಾವುದೇ ಪರಿಹಾರ ಸಿಗುವಂತಹ ಸಾಧ್ಯತೆಗಳಿಲ್ಲ.
ಜಿಲ್ಲಾ ಪಾಲಿಕ್ಲಿನಿಕ್, 7 ತಾಲೂಕು ಆಸ್ಪತ್ರೆಗಳು ಸೇರಿದಂತೆ ಜಿಲ್ಲೆಯಲ್ಲಿ 86 ಪಶು ಆಸ್ಪತ್ರೆಗಳಿದ್ದು, 357 ಮಂಜೂರಾದ ಹುದ್ದೆಗಳಲ್ಲಿ ಕೇವಲ 71 ಹುದ್ದೆಗಳಷ್ಟೇ ಭರ್ತಿಯಾಗಿದೆ. 86 ಪಶುವೈದ್ಯಕೀಯ ಆಸ್ಪತ್ರೆಗಳ ಪೈಕಿ 19 ಆಸ್ಪತ್ರೆಗಳಿಗೆ ಪಶುವೈದ್ಯಾಧಿಕಾರಿಗಳೇ ಇಲ್ಲದಂತಾಗಿದೆ.
ಜಿಲ್ಲೆಯ 21 ಆಸ್ಪತ್ರೆಗಳಲ್ಲಿ ಪಶುವೈದ್ಯಾಧಿಕಾರಿಗಳು, ಪಶು ವೈದ್ಯಕೀಯ ಪರೀಕ್ಷಕರು, ಡಿ ದರ್ಜೆ ನೌಕರರು ಸೇರಿದಂತೆ ಯಾವುದೇ ಖಾಯಂ ಹುದ್ದೆಗಳೇ ಇಲ್ಲ. ಇಲ್ಲಿಗೆ ಡಿ ದರ್ಜೆಯ ನೌಕರರನ್ನು ಗುತ್ತಿಗೆ ಆಧಾರದಲ್ಲಿ ನಿಯೋಜಿಸಲಾಗಿದೆ.
ಜಿಲ್ಲೆಯಲ್ಲಿ 10ಲಕ್ಷಕ್ಕೂ ಅಧಿಕ ಸಾಕು ಪ್ರಾಣಿಗಳಿದ್ದು, ಬೀಡಾದಿ ದನಗಳು ಸಹಿತ ಬೀದಿ ಶ್ವಾನಗಳ ಸಂಖ್ಯೆಯೂ ಅಲ್ಲಲ್ಲಿ ಕಂಡುಬರುತ್ತಿದೆ.
ಇವುಗಳ ಸೂಕ್ತ ಆರೈಕೆ ಸಹಿತ ಬೀದಿಶ್ವಾನಗಳನ್ನು ಹಿಡಿಯಲು ಸಿಬಂದಿ ಕೊರತೆಯೂ ಜಿಲ್ಲೆಯಲ್ಲಿ ಇರುವ ಬಗ್ಗೆ ಹಲವಾರು ಸಭೆಗಳಲ್ಲಿ ಚರ್ಚೆ ನಡೆದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ವೈದ್ಯರು ಸಹಿತ ಸಿಬಂದಿ ಕೊರತೆಯಿಂದಾಗಿ ಕೆಲಸ ನಿರ್ವಹಣೆ ಕಷ್ಟಕರವಾಗಿದೆ.
