ತುಮಕೂರು: ‘ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 4,500 ಮುಸ್ಲಿಮ್ ಮತದಾರರು ಸೇರಿದಂತೆ ಒಟ್ಟು 21 ಸಾವಿರಕ್ಕೂ ಹೆಚ್ಚು ಮತದಾರರನ್ನು ಕೈಬಿಡಲಾಗಿದೆ, ಆಧಾರ್ ಕಡ್ಡಾಯ ಹೆಸರಿನಲ್ಲಿ 21 ಸಾವಿರ ಮತದಾರರನ್ನು ಕೈಬಿಡಲಾಗುತ್ತಿದೆ’ ಎಂದು ಮಾಜಿ ಶಾಸಕ ರಫೀಕ್ ಅಹ್ಮದ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ”2022ರ ಜನವರಿಯಲ್ಲಿ ನೀಡಿದ ಅಂತಿಮ ಮತದಾರರ ಪಟ್ಟಿಗೂ, ಕೆಲ ದಿನಗಳ ಹಿಂದೆ ಪ್ರಕಟಮಾಡಿರುವ 2023ರ ಮತದಾರರ ಕರಡು ಪಟ್ಟಿಯಲ್ಲಿ 9277 ಮತದಾರರನ್ನು ಹೊಸದಾಗಿ ಸೇರಿಸಿ, 6664 ಜನರನ್ನು ಕೈಬಿಡಲಾಗಿದೆ. ಆದರೆ ಒಟ್ಟಾರೆ ಮತಪಟ್ಟಿಯಲ್ಲಿ ಕಳೆದ 10 ತಿಂಗಳಲ್ಲಿ 21ಸಾವಿರ ಮತದಾರರನ್ನು ಕೈಬಿಡಲಾಗಿದೆ, ಅಲ್ಪಸಂಖ್ಯಾತ ಮತ್ತು ದಲಿತ ವರ್ಗದ ಮತಗಳನ್ನೇ ಕೈಬಿಡುವ ಮೂಲಕ ರಾಜಕೀಯ ಮಾಡಲಾಗಿದೆ” ಎಂದು ದೂರಿದರು.
”2013ರಲ್ಲಿ ಕರಡು ಪಟ್ಟಿಯಲ್ಲಿ ಕೈಬಿಡುವ ಮತದಾರರ ಪಟ್ಟಿ, ಸೇರ್ಪಡೆಗೊಳ್ಳುವ ಮತದಾರರ ಪಟ್ಟಿಯನ್ನು ಮಾಹಿತಿ ಸಮೇತ ನೀಡಲಾಗಿತ್ತು, ಆದರೆ 2022ರ ಮತದಾರರ ಪಟ್ಟಿಯಲ್ಲಿ ಯಾರನ್ನು ಕೈ ಬಿಡಲಾಗುತ್ತಿದೆ ಮತ್ತು ಯಾರನ್ನು ಸೇರಿಸಲಾಗಿದೆ ಎಂಬ ಮಾಹಿತಿಯೇ ಇಲ್ಲ. ಮಾಹಿತಿಯನ್ನು ಮುಚ್ಚಿಟ್ಟು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳನ್ನು ಭೇಟಿಯಾಗಿ ದೂರು ಸಲ್ಲಿಸಲಾಗುವುದು” ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

