ಧಾರವಾಡ: ಈ ಹಿಂದೆ ತಮ್ಮ ಮನೆಗೆ ಬರುತ್ತಿದ್ದ ಅನಾಮಧೆಯ ಪತ್ರಗಳ ವಿರುದ್ಧ ಧ್ವನಿ ಎತ್ತಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು, ಆ ರೀತಿ ಪತ್ರ ಬರೆಯುವವರನ್ನು ಪತ್ತೆ ಮಾಡಬೇಕು ಎಂದು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದರು. ಕಳೆದ ನಾಲ್ಕೂವರೆ ವರ್ಷಗಳಿಂದ ಈ ರೀತಿಯ ಯಾವುದೇ ಪತ್ರಗಳು ಬಂದಿರಲಿಲ್ಲ. ಆದರೆ, ಇದೀಗ ವಿನಯ್ ಕುಲಕರ್ಣಿ ಅವರ ನಿವಾಸಕ್ಕೆ ಮತ್ತೆ ಅನಾಮಧೇಯ ಬೆದರಿಕೆ ಪತ್ರಗಳು ಬಂದಿದ್ದು, ಇದರ ವಿರುದ್ಧ ಇದೀಗ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ನೂರಾರು ಜನ ಕಾರ್ಯಕರ್ತರೊಂದಿಗೆ ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಬಂದ ಶಿವಲೀಲಾ ಕುಲಕರ್ಣಿ ಹಾಗೂ ಅವರ ಪುತ್ರಿ ವೈಶಾಲಿ ಅವರು, ತಮ್ಮ ಮನೆಗೆ ಬರುತ್ತಿರುವ ಅನಾಮಧೇಯ ಪತ್ರಗಳ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪೊಲೀಸ್ ಠಾಣೆ ಮುಂಭಾಗದಲ್ಲೇ ಕೆಲಹೊತ್ತು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ವಿನಯ್ ಅವರ ಮೇಲೆ ಸುಳ್ಳು ಆರೋಪ ಮಾಡಿ ಈ ರೀತಿಯ ಅನಾಮಧೇಯ ಪತ್ರ ಬರೆಯುತ್ತಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಕೈಬರಹದಿಂದ ಪತ್ರ ಬರೆಯಲಾಗಿದೆ. ನಿಮ್ಮನ್ನು ಇನ್ನೊಂದು ಕೇಸ್‌ನಲ್ಲಿ ಸಿಲುಕಿಸುತ್ತೇವೆ. ನಿಮ್ಮನ್ನು ಮತ್ತೆ ಜೈಲಿಗೆ ಕಳುಹಿಸುತ್ತೇವೆ. ಶಿವಯೋಗಿ ಸ್ವಾಮೀಜಿ ನಿಧನರಾಗಿದ್ದು, ಆ ಕೇಸ್‌ನಲ್ಲಿ ನಿಮ್ಮನ್ನು ಸಿಲುಕಿಸುತ್ತೇವೆ. ನಮ್ಮ ಜೊತೆ ಬಿಜೆಪಿ ನಾಯಕರು, ವಕೀಲರು ಇದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಶಿವಲೀಲಾ ತಿಳಿಸಿದ್ದಾರೆ.
ಸದ್ಯ ಈ ಅನಾಮಧೇಯ ಪತ್ರದಲ್ಲಿ ಹಲವು ವಿಷಯಗಳನ್ನು ಉಲ್ಲೇಖ ಮಾಡಲಾಗಿದ್ದು, ಇದೆಲ್ಲದರ ಕುರಿತು ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಇದನ್ನು ಯಾವ ರೀತಿ ಪರಿಗಣಿಸಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

