ಬೆಂಗಳೂರು : ಕೊರೋನಾ ಸೋಂಕು ಚಿಕಿತ್ಸಾ ವ್ಯವಸ್ಥೆಗಳ ಸುಸ್ಥಿತಿಯನ್ನು ಪರಿಶೀಲನೆ ನಡೆಸಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದ್ದು, ಡಿ.27ರಂದು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಣಕು (ಮಾಕ್‌ಡ್ರಿಲ್) ಕಾರ್ಯಾಚರಣೆ ನಡೆಸಲಾಗುವುದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಕೇಂದ್ರ ಆರೋಗ್ಯ ಸಚಿವರ ವಿಡಿಯೋ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ‘ಒಂದು ವೇಳೆ ಸೋಂಕು ಹೆಚ್ಚಳವಾದರೆ ಚಿಕಿತ್ಸೆಗೆ ಎಲ್ಲಾ ತಯಾರಿ ಹೊಂದಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.
ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್, ಆಕ್ಸಿಜನ್ ಜನರೇಟರ್ ಸೇರಿದಂತೆ ಕೋವಿಡ್ ಉಪಕರಣಗಳು, ಸಿಬ್ಬಂದಿ, ವ್ಯವಸ್ಥೆಗಳು ಸರಿಯಾಗಿದೆಯೇ ಅನ್ನುವುದನ್ನು ಪರಿಶೀಲನೆ ನಡೆಸಲಾಗುತ್ತದೆ. ಅಗತ್ಯ ವ್ಯವಸ್ಥೆ, ಪರಿಷ್ಕರಣೆ ಮಾಡಿಕೊಳ್ಳಲಾಗುವುದು. ಅಂತಿಮವಾಗಿ 27ರಂದು ಕೊರೋನಾ ಚಿಕಿತ್ಸೆ ವ್ಯವಸ್ಥೆಯ ಅಣಕು ಕಾರ್ಯಾಚರಣೆ ನಡೆಸಲಾಗುವುದು’ ಎಂದರು. ಕಳೆದ ಮೂರು ತಿಂಗಳಿನಿಂದ ಕೊರೋನಾ ವಿಶ್ವದ ನಾನಾ ದೇಶಗಳಲ್ಲಿ ಹೇಗೆ ಏರಿಕೆಯಾಗುತ್ತಿದೆ ಎನ್ನುವ ಬಗ್ಗೆ ಸಭೆಯಲ್ಲಿ ಎಲ್ಲಾ ರಾಜ್ಯಗಳಿಗೂ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ ನೀಡಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

