ಕೊಡಗು : ಇವರೆಲ್ಲಾ ದೇಶದ ಮುಂದಿನ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯರು ಪುಟಾಣಿ ಮಕ್ಕಳ ಲಾಲನೆ ಪಾಲನೆ ಮಾಡುತ್ತಾ ಜೊತೆಗೆ ವಿದ್ಯೆಯನ್ನು ಕಲಿಸುವ ಕೆಲಸವನ್ನೂ ಒಟ್ಟೊಟ್ಟಿಗೆ ಮಾಡುವ ಇವರ ಹೊಟ್ಟೆಗೆ ಹಿಟ್ಟಿಲ್ಲ ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ.
ಹೌದು ಅದಕ್ಕೆ ಕಾರಣ ಅಂಗನಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರಿಗೆ ಪ್ರತ ತಿಂಗಳು ದೊರೆಯುವ ಗೌರವಧನ ಕಳೆದ ನಾಲ್ಕು ತಿಂಗಳಿನಿಂದ ದೊರೆತ್ತಿಲ್ಲ ಎನ್ನುವುದು. ಇದನ್ನೇ ನಂಬಿಕೊಂಡು ಸ್ವಂತ ಮನೆಯೂ ಇಲ್ಲದೆ ಬಾಡಿಗೆ ಮನೆಗಳಲ್ಲಿ ಬದುಕುವ ಕೊಡಗಿನ ಎಷ್ಟೋ ಅಂಗನವಾಡಿ ನೌಕರರು ಈಗ ಅನಿವಾರ್ಯವಾಗಿ ಕಾಫಿ ತೋಟಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಹೌದು ನಾಲ್ಕು ತಿಂಗಳಿನಿಂದ ಗೌರವಧನ ಸಿಗದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ರಜಾ ದಿನಗಳಲ್ಲಿ ಕಾಫಿ ತೋಟಗಳಿಗೆ ಕೂಲಿ ಕೆಲಸಕ್ಕೆ ಹೋಗಿ ಬರುವ ಕೂಲಿ ಹಣದಲ್ಲಿ ಬದುಕು ನಡೆಸುತ್ತಿದ್ದಾರೆ.
ಎಷ್ಟೋ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು ಬಾಡಿಗೆ ಮನೆಗಳಲ್ಲಿ ಬದುಕುತ್ತಿದ್ದು, ತಿಂಗಳಿಗೆ ಐದರಿಂದ ಆರು ಸಾವಿರ ರೂಪಾಯಿಯನ್ನು ಮನೆ ಬಾಡಿಗೆಯನ್ನೇ ಭರಿಸಬೇಕು. ಜೊತೆಗೆ ವಿವಿಧ ಕಾರಣಗಳಿಗೆ ಬ್ಯಾಂಕುಗಳಿಂದ ಸಾಲ ಮಾಡಿಕೊಂಡಿದ್ದು, ಇಎಂಐ ಕಟ್ಟಬೇಕು ಮನೆಯ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕು. ತಿಂಗಳಿಗೆ ಸಿಗುವ ಕೇವಲ 11250 ರೂಪಾಯಿ ಗೌರವಧನ ಪ್ರತಿ ತಿಂಗಳು ಬರುತ್ತಿದ್ದರಿಂದ ಹೇಗೋ ಮ್ಯಾನೇಜ್ ಮಾಡಿಕೊಳ್ಳುತ್ತಿದ್ದೆವು. ಆದರೆ ನಾಲ್ಕು ತಿಂಗಳಿನಿಂದ ಅದೂ ಬಾರದೆ ಇರುವುದರಿಂದ ಅನಿವಾರ್ಯವಾಗಿ ಕೂಲಿ ಕೆಲಸ ಮಾಡದೆ ಬೇರೆ ದಾರಿಯಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಭಾನುವಾರ ಅಥವಾ ಇತರೆ ರಜೆ ದಿನಗಳಂದು ಕಾಫಿ ತೋಟಗಳಿಗೆ ಹೋಗಿ ಕೂಲಿ ಕೆಲಸ ಮಾಡಿ ಬದುಕು ದೂಡುತ್ತಿದ್ದೇವೆ ಎಂದು ಮಡಿಕೇರಿಯ ಅಂಗನವಾಡಿಯೊಂದರ ಶಿಕ್ಷಕಿ ಸುಮಿತ್ರಾ ಹೇಳಿದ್ದಾರೆ.
ಏನೇ ಆಗಲಿ ಪುಟ್ಟ ಪುಟ್ಟ ಮಕ್ಕಳನ್ನು ಪಾಲನೆ ಮಾಡುತ್ತಾ ಅವರಿಗೆ ವಿದ್ಯೆಯನ್ನು ಕಲಿಸುವ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು ಕೂಲಿ ಕೆಲಸ ಮಾಡಿಕೊಂಡು ಬದುಕು ದೂಡುವಂತೆ ಆಗಿರುವುದು ಮಾತ್ರ ವಿಪರ್ಯಾಸ.
bigtvnews | Hubli Dharwad News | Kannada News | Karnataka News Hubli News | News In Hubli | Local news

