ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹವಾಮಾನ ವೈಪರೀತ್ಯ ನಿವ೯ಹಣೆಗೆ ಕೃಷಿ ತಾಂತ್ರಿಕತೆಗಳು ಎಂಬ ಶೀರ್ಷಿಕೆಯಡಿಯಲ್ಲಿ ಸೆಪ್ಟೆಂಬರ್ 21 ರಿಂದ 24 ರವರೆಗೆ ಕೃಷಿ ಮೇಳವನ್ನು ಆಯೋಜಿಸಲಾಗಿದೆ. ಈ ಬಾರಿ ಕೃಷಿ ಮೇಳದ ಮೂಲಕ ಅಲ್ಪ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ರೈತರಿಗೆ ಕೃಷಿ ತಂತ್ರಜ್ಞಾನಗಳನ್ನು ತಲುಪಿಸುವುದು ಮುಖ್ಯ ಉದ್ದೇಶವಾಗಿದ್ದು, ಮೇಳದಲ್ಲಿ ಸುಮಾರು 14-16 ಲಕ್ಷ ರೈತರು ಭಾಗವಹಿಸುವ ನಿರೀಕ್ಷೆಯಿದೆ.
ನೋಂದಣಿ ಮಾಡುವ ವ್ಯವಸ್ಥೆಯನ್ನು ಈ ಕೃಷಿ ಮೇಳದಲ್ಲಿ ಕಲ್ಪಿಸಲಾಗಿದೆ. ಮೇಳದಲ್ಲಿ ಪ್ರಾಯೋಗಿಕ ತಾಕುಗಳ ವೀಕ್ಷಣೆ, ತಜ್ಞರಿಂದ ಕೃಷಿ ಸಮಸ್ಯೆಗಳ ಕುರಿತು ವಿಚಾರ ವಿನಿಮಯ, ಕೃಷಿ ಮತ್ತು ವಸ್ತು ಪ್ರದರ್ಶನ, ಫಲ-ಪುಷ್ಪ ಪ್ರದರ್ಶನ, ಗಡ್ಡೆ ಗೆಣಸು ಪ್ರದರ್ಶನ, ವಿಸ್ಮಯಕಾರಿ ಕೀಟ / ಪ್ರಪಂಚ, ಸಾವಯವ ಕೃಷಿ ವಸ್ತು ಪ್ರದರ್ಶನ, ಕೃಷಿ ಪರಿಕರಗಳ ಮಾರಾಟ, ಕೃಷಿ ಪ್ರಕಟಣೆಗಳ ಮಾರಾಟ ಇತ್ಯಾದಿ ಇರುತ್ತದೆ. ಕೃಷಿಮೇಳದಲ್ಲಿ ವಸ್ತು ಪ್ರದರ್ಶನದ ಮಳಿಗೆಗಳು, ಕೃಷಿ ವಸ್ತು ಪ್ರದರ್ಶನದಲ್ಲಿ 150 ಹೈಟೆಕ್ ಮಳಿಗೆಗಳು, 214 ಸಾಮಾನ್ಯ ಮಳಿಗೆಗಳು, 110 ಯಂತ್ರೋಪಕರಣ ಮಳಿಗೆಗಳು, 27 ಟ್ರ್ಯಾಕ್ಟರ್ ಇತ್ಯಾದಿ ಭಾರಿ ಯಂತ್ರೋಪಕರಣಗಳ ಮಳಿಗೆಗಳು, ಹಾಗೂ 28 ಆಹಾರ ಮಳಿಗೆಗಳು ಈಗಾಗಲೇ ಬುಕ್ ಆಗಿವೆ.
ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಬೆಳೆ ಪದ್ಧತಿಗಳು ಹಾಗೂ ಕೃಷಿ ತಾಂತ್ರಿಕತೆಗಳು, ಸಮಗ್ರ ಬೆಳೆ ನಿರ್ವಹಣೆ, ಜೈವಿಕ ಗೊಬ್ಬರ ಹಾಗೂ ಪೀಡೆನಾಶಕಗಳು ಎಣ್ಣೆಕಾಳು, ದ್ವಿದಳ ಧಾನ್ಯಗಳು ಮತ್ತು ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಮಳೆ ನೀರು ಕೊಯ್ದು ಮತ್ತು ಅಂತರ್ಜಲ ಮರುಪೂರಣ ನೈಸರ್ಗಿಕ ಕೃಷಿ, ಸಾವಯವ ಕೃಷಿ ಮತ್ತು ಮಣ್ಣಿನ ಫಲವತ್ತತೆ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಕೃಷಿ ಪರಿಕರಗಳು (ಬೀಜ, ರಸಾಯನಿಕ ಗೊಬ್ಬರ, ಕೀಟನಾಶಕ, ರೋಗನಾಶಕ, ಕಳೆನಾಶಕ, ಬೆಳೆವರ್ಧಕ), ನರ್ಸರಿ ಮಳಿಗೆಗಳು, ಪ್ರಕಟಣೆಗಳ ಮಳಿಗೆಗಳು/ ಹಣಕಾಸು ಸಂಸ್ಥೆಗಳು,ನೀರಾವರಿ ಮತ್ತು ಕೃಷಿ ಉಪಕರಣಗಳು, ಕೃಷಿ ಯಂತ್ರೋಪಕರಣಗಳ ಮಳಿಗೆಗಳು, ಭಾರಿ ಯಂತ್ರೋಪಕರಣಗಳ ಮಳಿಗೆಗಳು, ಕೃಷಿ ಬಳಕೆಯ ಪ್ಲಾಸ್ಟಿಕ್ ಮಳಿಗೆಗಳು. ಆಹಾರ ಮಳಿಗೆಗಳು, ಜಾನುವಾರು ಪ್ರದರ್ಶನ ಮಳಿಗೆಗಳು, ಸಂಶೋಧನಾ ತಾಕುಗಳು, ವಿಶ್ವವಿದ್ಯಾಲಯದ ಮಳಿಗೆಗಳು. ಬೀಜ ಘಟಕದ ಮಳಿಗೆಗಳು ಮತ್ತು ಇತರೆ ಮಳಿಗೆಗಳು ಇರಲಿವೆ.
ಸೆ. 22 ರಂದು ಬೆಳಿಗ್ಗೆ 10-30 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಸಚಿವ ಡಿ.ಕೆ.ಶಿವಕುಮಾರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯ ಸಚೇತಕ ಸಲೀಂ ಅಹ್ಮದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಅವರು ಉಪಸ್ಥಿತರಿರುವರು. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕಾರ್ಯಕ್ರಮದಲ್ಲಿ ಕೃಷಿ ಪ್ರಕಟಣೆಗಳ ಬಿಡುಗಡೆ ಮಾಡುವರು. ಸಚಿವರಾದ ಹೆಚ್.ಕೆ.ಪಾಟೀಲ, ಎಮ್.ಬಿ.ಪಾಟೀಲ, ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ಆರ್.ಬಿ.ತಿಮ್ಮಾಪುರ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಂಕಾಳ್ ವೈದ್ಯ ಗೌರವ ಅತಿಥಿಗಳಾಗಿ ಭಾಗವಹಿಸವರು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಅಧ್ಯಕ್ಷ ವಿನಯ ಕುಲಕರ್ಣಿ ಅಧ್ಯಕ್ಷತೆ ವಹಿಸುವರು.
bigtvnews | Hubli Dharwad News | Kannada News | Karnataka News Hubli News | News In Hubli | Local news

