ಕೊಪ್ಪಳ: ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿರುವ ಕರ್ನಾಟಕ ನೀರಾವರಿ ನಿಗಮ ಕಚೇರಿಗೆ ಇಂದು ರೈತರು ಮುತ್ತಿಗೆ ಹಾಕಿ, ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಾರಟಗಿ ತಾಲೂಕಿನ ಯರಡೋಣಾ, ತಿಮ್ಮಾಪುರ, ಹಾಲಸಮುದ್ರ, ಬೂದಗುಂಪಾ, ಚನ್ನಳ್ಳಿ ಮಾವಿನ ಮಡಗು ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರು, ತುಂಗಭದ್ರಾ ಜಲಾಶಯದ ನೀರನ್ನೇ ನಂಬಿ ಕೃಷಿ ಮಾಡುತ್ತಿದ್ದಾರೆ. ಈ ಗ್ರಾಮಗಳಿಗೆಲ್ಲ 31 ಮತ್ತು 32 ನೇ ವಿತರಣಾ ಕಾಲುವೆಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ ಕಳೆದ ಕೆಲ ದಿನಗಳಿಂದ ಕಾಲುವೆಗಳ ಕೊನೆ ಭಾಗದ ರೈತರ ಜಮೀನಿಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ನೀರಿಲ್ಲದೇ ಹಸಿರಾಗಿದ್ದ ಭತ್ತ ಸೊರಗುತ್ತಿದೆ. ಇದು ಅನ್ನದಾತರ ಚಿಂತೆ ಹೆಚ್ಚಿಸಿದೆ.
ತುಂಗಭದ್ರಾ ಜಲಾಶಯ ತುಂಬಿದ್ದರಿಂದ, ತಮ್ಮ ಬೆಳೆಗೆ ನೀರಿನ ಸಮಸ್ಯೆ ಆಗುವುದಿಲ್ಲ ಎಂದು ತಿಳಿದು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಭತ್ತ ಬೆಳದಿದ್ದಾರೆ. ಆದರೆ ಇದೀಗ ಸರಿಯಾಗಿ ನೀರು ಪೂರೈಕೆಯಾಗದೇ ಇರುವುದರಿಂದ ಭತ್ತದ ಬೆಳೆ ಒಣಗಲು ಆರಂಭವಾಗಿದೆ. ಹೀಗಾಗಿ ಕಾಲುವೆಗಳ ಕೊನೆ ಭಾಗದ ರೈತರ ಜಮೀನಿಗೆ ಕೂಡ ಸರಿಯಾಗಿ ನೀರು ಬರುವಂತೆ ಕ್ರಮವಹಿಸಬೇಕು ಎಂದು ರೈತರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಆಗ್ರಹಿಸಿದರು.
ಇನ್ನು 31 ನೇ ವಿತರಣಾ ಕಾಲುವೆಗೆ 280 ಕ್ಯೂಸೆಕ್ ನೀರನ್ನು ನಿಗದಿ ಮಾಡಲಾಗಿದೆ. ಈ ಕಾಲುವೆ 33 ಕಿಲೋ ಮೀಟರ್ ದೂರದವರೆಗೆ ತನ್ನ ವ್ಯಾಪ್ತಿಯನ್ನು ಹೊಂದಿದೆ. ಆದ್ರೆ, ಕಾಲುವೆ ಆರಂಭದಲ್ಲಿರುವ ರೈತರ ಜಮೀನಿಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ. ಉಪಕಾಲುವೆ ಮತ್ತು ಕಾಲುವೆಯ ಕೊನೆ ಭಾಗದ ರೈತರ ಜಮೀನಿಗೆ ನೀರು ಮುಟ್ಟುತ್ತಿಲ್ಲ. ಇದಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ವಹಣೆಯ ಕೊರತೆಯೇ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ. ಕೆಲ ರೈತರು ನೀರನ್ನು ಕೆಳಭಾಗದ ರೈತರ ಜಮೀನಿಗೆ ಹೋಗಲು ಅಡ್ಡಿ ಮಾಡುತ್ತಿರುವುದು ಒಂದಡೆಯಾದರೆ, ಇನ್ನೊಂದೆಡೆ ಎಡದಂಡೆ ಕಾಲುವೆಯಿಂದ 31, 32 ವಿತರಣಾ ಕಾಲುವೆಗೆ ನಿಗದಿತ ಪ್ರಮಾಣದಲ್ಲಿ ನೀರು ಬಿಡದೇ ಇರುವುದು.
ಸದ್ಯ ನೀರು ನಿರ್ವಹಣೆ ಸಮಸ್ಯೆಯಿಂದ ಕಾಲುವೆಯ ಕೊನೆ ಭಾಗದಲ್ಲಿರುವ ರೈತರ ಜಮೀನಿಗೆ ನೀರು ಹೋಗುತ್ತಿಲ್ಲ. ಉತ್ತಮವಾಗಿ ಬೆಳೆ ಬಂದಿರುವ ಸಮಯದಲ್ಲಿ ಭತ್ತಕ್ಕೆ ಸೂಕ್ತ ನೀರು ಸಿಗದೇ ಹೋದರೆ, ಭತ್ತ ಒಣಗಿ ಹೋಗುತ್ತದೆ, ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಿ, ಕಾಲುವೆಯ ಕೊನೆ ಭಾಗದ ರೈತರಿಗೆ ಕೂಡ ನೀರು ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

