ಬೆಳಗಾವಿ: ಪ್ರಾಕೃತಿಕ, ಧಾರ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಗಡಿಜಿಲ್ಲೆ ಬೆಳಗಾವಿಯಲ್ಲಿ ಇರುವ ಪ್ರವಾಸಿ ತಾಣಗಳು ಸಾಕಷ್ಟು. ಆದರೆ, ಪ್ರಚಾರದ ಕೊರತೆ, ಮೂಲಸೌಕರ್ಯ ಅಭಾವ, ಆಡಳಿತ ಯಂತ್ರದ ತಾತ್ಸಾರ ನಿಲುವಿನಿಂದ ಇಲ್ಲಿ ಪ್ರವಾಸೋದ್ಯಮ ಸೊರಗಿದೆ.
ಸವದತ್ತಿಯ ಯಲ್ಲಮ್ಮನಗುಡ್ಡ, ಗೋಕಾಕ ಜಲಪಾತ, ಗೊಡಚಿನಮಲ್ಕಿ ಜಲಪಾತ, ಧೂಪದಾಳ ಪಕ್ಷಿಧಾಮ, ಚನ್ನಮ್ಮನ ಕಿತ್ತೂರು ಕೋಟೆ, ಖಾನಾಪುರ ತಾಲ್ಲೂಕಿನ ಹಲಸಿ ಸೇರಿದಂತೆ ಜಿಲ್ಲೆಯಲ್ಲಿ 98 ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ಇಲಾಖೆ ಗುರುತಿಸಿದೆ.
ಸವದತ್ತಿಯ ಯಲ್ಲಮ್ಮ ದೇವಸ್ಥಾನ ಸುಮಾರು 3 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ, ಮೂಲಸೌಕರ್ಯವೇ ಇಲ್ಲ. ಈಗ ಯಲ್ಲಮ್ಮನಗುಡ್ಡ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ರಚಿಸಿದ ಪ್ರಾಧಿಕಾರದ ಮೂಲಕ ಭಕ್ತರಿಗೆ ಹೆಚ್ಚಿನ ಸೌಕರ್ಯ ಸಿಗಬಹುದೆಂದು ನಿರೀಕ್ಷಿಸಲಾಗಿದೆ.
ಇನ್ನೂ ಮಳೆಗಾಲದಲ್ಲಿ ಮೈದುಂಬಿ ಹರಿಯುವ ಗೋಕಾಕ ಜಲಪಾತ, ಗೊಡಚಿನಮಲ್ಕಿ ಜಲಪಾತದಲ್ಲೂ ಸಾಲು ಸಾಲು ಸಮಸ್ಯೆಗಳಿವೆ. ಗೊಡಚಿನಮಲ್ಕಿ ಗ್ರಾಮದಿಂದ ಜಲಪಾತ ವೀಕ್ಷಣೆಗೆ 3 ಕಿ.ಮೀ. ದೂರವನ್ನು ನಡೆದುಕೊಂಡೇ ಕ್ರಮಿಸಬೇಕಿದೆ ಆ ಮಾರ್ಗವೂ ಸುರಕ್ಷಿತವಾಗಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

