ರಾಯಚೂರು: ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಕಾಲೇಜಿನ ಕೀಟಶಾಸ್ತ್ರ ವಿಭಾಗದ ಕೃಷಿ ಘಟಕವು ರೇಷ್ಮೆ ಬೆಳೆಗಾರರು ಸುಲಭವಾಗಿ ಹೊಸ ತಂತ್ರಜ್ಞಾನದ ಮೂಲಕ ಮಾಹಿತಿ ಪಡೆದುಕೊಳ್ಳುವಂತಾಗಲು ಕ್ಯೂಆರ್‌ಕೋಡ್ ಅಭಿವೃದ್ಧಿ ಪಡಿಸಿದೆ.
ರೇಷ್ಮೆ ಹುಳುವಿನ ಜೀವನ ಚಕ್ರ, ಅವುಗಳ ಸೋಂಕು ರೋಗ, ಬ್ಯಾಕ್ಟೇರಿಯಾದಿಂದ ಬರುವ ರೋಗ, ಬೂದಿರೋಗ ಹಾಗೂ ಚುಕ್ಕೆ ರೋಗಗಳ ಅಧ್ಯಯನ ಮಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕ್ಯೂಆರ್‌ಕೋಡ್ ಸಿದ್ಧಪಡಿಸಿ ಮಾಹಿತಿ ನೀಡುತ್ತಿದೆ.
ಒಟ್ಟು 12 ವಿಷಯಗಳಿಗೆ ಸಂಬಂಧಪಟ್ಟಂತೆ ಕ್ಯೂಆರ್ ಕೋಡ್ ಸಿದ್ಧಪಡಿಸಲಾಗಿದೆ. ಈ ಮೂಲಕ ರೈತರಿಗೆ ಮಾಹಿತಿ ಒದಗಿಸಲು ಪ್ರಯತ್ನಿಸಲಾಗಿದೆ. ಪ್ರಸ್ತುತ ರೈತರು ಸಹ ಸ್ಮಾರ್ಟ್‌ಫೋನ್ ಬಳಸಲು ಆರಂಭಿಸುರುವ ಕಾರಣ ಅವರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಕೃಷಿ ವಿಜ್ಙಾನಗಳ ವಿಶ್ವವಿದ್ಯಾಲಯದ ರೇಷ್ಮೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಿ.ಕೆ.ಹಾದಿಮನಿ ಹೇಳಿದ್ದಾರೆ.
ಕೃಷಿ ವಿಶ್ವವಿದ್ಯಾಲಯವು ಸಿದ್ಧಪಡಿಸಿದ ಕ್ಯೂಆರ್‌ಕೋಡ್‌ನಿಂದ ರೇಷ್ಮೆಹುಳಗಳ ನಿರ್ವಹಣೆ ಹಾಗೂ ಅವುಗಳಿಗೆ ಬರುವ ರೋಗಗಳನ್ನು ತಡೆಯಲು ತ್ವರಿತವಾಗಿ ಕ್ರಮ ವಹಿಸಲು ಸಾಧ್ಯವಾಗಿದೆ. ರೇಷ್ಮೆ ಬೆಳೆಗಾರರಿಗೆ ಬೇಕಿರುವ ಮಾಹಿತಿಯನ್ನು ಸಂಕ್ಷಿಪ್ತವಾಗಿ ಒದಗಿಸಿ ಅನುಕೂಲ ಮಾಡಿಕೊಡಲಾಗಿದೆ ಎಂದು ಕಲಬುರಗಿ ಜಿಲ್ಲೆಯ ಜೀವರ್ಗಿ ಕಲ್ಲಹಂಗರಗಾ ಪ್ರಗತಿಪರ ರೈತ ಪರಶುರಾಮ ಬೊಮ್ಮನಳ್ಳಿ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

