ಬೆಂಗಳೂರು: ಮೊದಲಿನಿಂದಲೂ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಡಾ.ಕೆ.ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುತ್ತಲೇ ಬಂದಿರುವ ಕರ್ನಾಟಕವು ಇದನ್ನು ಜಾರಿಗೊಳಿಸದಿರಲು ನಿರ್ಧಿರಿಸಿದೆ. ಕರ್ನಾಟಕದಲ್ಲಿ ಹಾದು ಹೋಗಿರುವ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಸುಮಾರು ಹನ್ನೊಂದು ಜಿಲ್ಲೆಗಳ ಜನರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸದೇ ಸಂಪೂರ್ಣವಾಗಿ ವಿರೋಧಿಸುವ ನಿರ್ಧಾರಕ್ಕೆ ಬರಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ವಿರೋಧಿಸಲು ನಿರ್ಣಯಿಸಿತು.
ಪಶ್ಚಿಮಘಟ್ಟ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಕೇಂದ್ರ ಸರ್ಕಾರವು 2024ರ ಜುಲೈ 31ರಂದು ಆರನೇ ಕರಡು ಅಧಿಸೂಚನೆ ಹೊರಡಿಸಿತ್ತು. ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿರುವುದರಿಂದ ಅಭಿಪ್ರಾಯ ತಿಳಿಸುವಂತೆ ಕರ್ನಾಟಕ ಸರ್ಕಾರವನ್ನು ಕೋರಿತ್ತು. 60 ದಿನಗಳಲ್ಲಿ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಿದ್ದರ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಕೇಂದ್ರ ಸರ್ಕಾರಕ್ಕ ಕರ್ನಾಟಕದ ನಿರ್ಧಾರವನ್ನು ತಿಳಿಸಲಾಗುತ್ತದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯಹಾರಗಳ ಸಚಿವ ಎಚ್.ಕೆ.ಪಾಟೀಲ್, ಪಶ್ಚಿಮ ಘಟ್ಟಗಳ ಕುರಿತಾಗಿ ವಿಜ್ಞಾನಿ ಡಾ.ಕೆ ಕಸ್ತೂರಿರಂಗನ್ ಅವರು ನೀಡಿರುವ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ನಿರ್ಧಾರಕ್ಕೆ ಬದ್ಧವಾಗಿರಲು ರಾಜ್ಯ ಸಚಿವ ಸಂಪುಟ ಒಮ್ಮತದ ನಿರ್ಧಾರ ಕೈಗೊಂಡಿದೆ. ಹಿಂದಿನ ಬಿಜೆಪಿ ಸರ್ಕಾರವೂ ಈ ವರದಿಯನ್ನು ತಿರಸ್ಕರಿಸಿ ನಿರ್ಣಯ ಕೈಗೊಂಡಿತ್ತು.ಅದೇ ನಿರ್ಣಯವನ್ನೇ ಮುಂದುವರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

