ತುಮಕೂರು: ಈಗಾಗಲೇ ಜಿಲ್ಲೆಯ ಅರ್ಧಭಾಗ ಒಣಗಿದ್ದು, ಹಸಿರು ಹೊದಿಕೆ ಪ್ರಮಾಣ ಶೇ 15ಕ್ಕೆ ಇಳಿಕೆಯಾಗಿದೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದಲ್ಲಿ ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ 70ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಮುಂದಿನ ಐದು ವರ್ಷದಲ್ಲಿ ಹಸಿರು ಹೊದಿಕೆ ಪ್ರಮಾಣ ಶೇ 20ಕ್ಕೆ ಹೆಚ್ಚಿಸಬೇಕು ಎಂದು ಸೂಚಿಸಿದರು.
ಪ್ರಪಂಚದಲ್ಲಿ ಹಸಿರು ಹೊದಿಕೆ ಪ್ರಮಾಣ ಶೇ 30ರಷ್ಟು, ಭಾರತದಲ್ಲಿ ಶೇ 21.6, ರಾಜ್ಯದಲ್ಲಿ ಶೇ 21.2ರಷ್ಟಿದೆ. ಜಿಲ್ಲೆ ಇದಕ್ಕಿಂತ ಕೆಳ ಮಟ್ಟಕ್ಕೆ ಇಳಿದಿದೆ ಅರಣ್ಯ ರಕ್ಷಿಸದಿದ್ದಲ್ಲಿ ಆನೆ ಸೇರಿದಂತೆ ಇತರೆ ಪ್ರಾಣಿಗಳನ್ನು ಸಿನಿಮಾ, ಮ್ಯೂಸಿಯಂಗಳಲ್ಲಿ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ನಾವು ಚಂದ್ರಯಾನಕ್ಕೆ ಹೋಗಿದ್ದೇವೆ, ತಂತ್ರಜ್ಞಾನ ಬೆಳೆದಿದೆ ಅಭಿವೃದ್ಧಿಯಲ್ಲಿ ತುಂಬಾ ಮುಂದೆ ಹೋಗಿದ್ದೇವೆ. ಆದರೆ, ಪರಿಸರ ಹೇಗೆ ಇಟ್ಟುಕೊಳ್ಳಬೇಕು ಎಂಬುವುದನ್ನು ಕಲಿತಿಲ್ಲ ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ 5 ಗಿಡ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಸಲಹೆ ಮಾಡಿದರು.
ಒಂದು ವರ್ಷಕ್ಕೆ 32 ಲಕ್ಷ ಸಸಿ ನೆಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ ಹಾಗಾದರೆ 10 ವರ್ಷದಲ್ಲಿ 3 ಕೋಟಿ ಸಸಿಗಳು ಎಲ್ಲಿಗೆ ಹೋದವು ಎಂದು ಪ್ರಶ್ನಿಸಿದರು. ಹಸಿರು ಹೊದಿಕೆ, ಜೀವಾಣು ರಕ್ಷಿಸಬೇಕು ಇಲ್ಲದಿದ್ದರೆ ಮುಂದೆ ಬಹಳ ಕೆಟ್ಟ ದಿನಗಳು ಕಾದಿವೆ ಎಂದು ಎಚ್ಚರಿಸಿದರು.
ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ ಭಾಗದಲ್ಲಿ ಪರಿಸರ ನಾಶ ಮಾಡಿದ್ದೇವೆ ಇಲ್ಲಿ ಪ್ರತಿ ವರ್ಷ ವಾಡಿಕೆ ಮಳೆಯಾಗುತ್ತಿಲ್ಲ. ಕೇವಲ ಕಾರ್ಯಕ್ರಮ ಮಾಡಿ ಸುಮ್ಮನಾದರೆ ಆಗುವುದಿಲ್ಲ ಜಿಲ್ಲೆಯಲ್ಲಿ ವಿಶೇಷವಾದ ಹಾವು, ಚಿಟ್ಟೆ, ಹಕ್ಕಿಗಳಿದ್ದು, ಎಲ್ಲವನ್ನು ಉಳಿಸಿಕೊಳ್ಳಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





