ಬೆಂಗಳೂರು: ಅಧಿಕಾರಿಗಳಿಂದ ಸ್ಪಷ್ಟ ಭರವಸೆ ಸಿಗದ ಕಾರಣ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ನೌಕರರು ಮತ್ತು ಸದಸ್ಯರು, ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿದ್ದ ಮುಷ್ಕರವನ್ನು ಶನಿವಾರ ಸ್ಥಗಿತಗೊಳಿಸಿ, ರಾಜ್ಯದ 31 ಜಿಲ್ಲಾ ಪಂಚಾಯಿತಿ ಕಚೇರಿಗಳ ಎದುರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಜಿಟಿಜಿಟಿ ಮಳೆಯ ನಡುವೆಯೂ ಧರಣಿಯಲ್ಲಿ ಪಾಲ್ಗೊಂಡಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ನೌಕರರ ಮತ್ತು ಸದಸ್ಯರನ್ನು ಪಂಚಾಯತ್ ರಾಜ್ ಆಯುಕ್ತಾಲಯದ ಉಪ ನಿರ್ದೇಶಕ ಎಂ.ಚಂದ್ರಪ್ಪ ಅವರು ಭೇಟಿ ಮಾಡಿ ಮನವಿ ಸ್ವೀಕರಿಸಿದರು.
ಈ ನಡುವೆ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಹಾಗೂ ಹೂವಿನಹಡಗಲಿ ಕ್ಷೇತ್ರದ ಶಾಸಕ ಕೃಷ್ಣ ನಾಯ್ಕ ಅವರು ಮುಷ್ಕರ ನಿರತರನ್ನು ಭೇಟಿ ಮಾಡಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಅವರು, ಹೋರಾಟದ ನೇತೃತ್ವದ ವಹಿಸಿದ್ದವರ ಜೊತೆ ಶುಕ್ರವಾರ ನಡೆಸಿದ ಸಭೆ ಫಲಪ್ರದವಾಗಿರಲಿಲ್ಲ. ಹಾಗಾಗಿ ನೌಕರರು ಶನಿವಾರವೂ ಮುಷ್ಕರ ಮುಂದುವರಿಸಿದ್ದರು.
ರಾಜ್ಯ ಬಿಲ್ ಕಲೆಕ್ಟರ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಮಾತನಾಡಿ, ಬೇಡಿಕೆ ಈಡೇರಿಸುವ ಸ್ಪಷ್ಟ ಭರವಸೆ ನೀಡದ ಕಾರಣ ಬೆಂಗಳೂರಿನಲ್ಲಿ ಮುಷ್ಕರ ಅಂತ್ಯಗೊಳಿಸಿ, ಇಂದಿನಿಂದ ಗ್ರಾಮ ಪಂಚಾಯಿತಿ ಕಚೇರಿಗಳನ್ನು ಬಂದ್ ಮಾಡಿ, ಆಯಾ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

