ತೋರಣಗಲ್ಲು: ಗ್ರಾಮೀಣ ಪ್ರದೇಶದ ಬಡ ರೈತರ ಸಮಗ್ರ ಅಭಿವೃದ್ಧಿಗೆ ರೈತ ಸಂಪರ್ಕ ಕೇಂದ್ರಗಳು ಅವಶ್ಯಕವಾಗಿದ್ದು, ರೈತರು ಕೃಷಿ ಇಲಾಖೆಯಿಂದ ಎಲ್ಲ ಸೌಲಭ್ಯಗಳನ್ನು ಸಕಾಲಕ್ಕೆ ಪಡೆದು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಸಂಸದ ಇ.ತುಕಾರಾಂ ಹೇಳಿದರು.
ಗ್ರಾಮದ ನಾಡಕಾರ್ಯಾಲಯದ ಬಳಿ ಜಿಲ್ಲಾ ಖನಿಜ ನಿಧಿಯ ಅನುದಾನದಲ್ಲಿ ₹50 ಲಕ್ಷ ವೆಚ್ಚದ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮದಲ್ಲಿ ಬಡ ಮಕ್ಕಳ ತಾಂತ್ರಿಕ ಶಿಕ್ಷಣದ ಅಭಿವೃದ್ಧಿಗೆ ₹3ಕೋಟಿ ವೆಚ್ಚದಲ್ಲಿ ಸರ್ಕಾರಿ ಐಟಿಐ ಕಾಲೇಜು ಕಟ್ಟಡ, ಗ್ರಾಮದ ಯುವಕರ ಸಬಲಿಕರಣಕ್ಕಾಗಿ ₹50ಲಕ್ಷ ವೆಚ್ಚದಲ್ಲಿ ಎರಡು ಯುವಕ ಮಂಡಳಿಯ ಕಟ್ಟಡಗಳನ್ನು ನಿರ್ಮಸಲಾಗುವುದು. ಹಳೆದರೋಜಿ ಗ್ರಾಮದ ಹೊರವಲಯದ ಹಳ್ಳದ ಬಳಿ ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ₹6ಕೋಟಿ ವೆಚ್ಚದ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು ಎಂದರು.
ತಾರಾನಗರ, ಹಳೆದರೋಜಿ ಗ್ರಾಮಗಳಲ್ಲಿ ನೂತನ ಬಸ್ ನಿಲ್ದಾಣ, ಹೊಸದರೋಜಿ ಗ್ರಾಮದಲ್ಲಿ ತೆರದ ಜಿಮ್ ಉದ್ಘಾಟಿಸಿದರು. ಬನ್ನಿಹಟ್ಟಿ, ವಡ್ಡು ಗ್ರಾಮಗಳ ಬಳಿ ಚೆಕ್ ಡ್ಯಾಂಗಳ ನಿರ್ಮಾಣ, ಕುರೆಕುಪ್ಪ ಪಟ್ಟಣದಲ್ಲಿ ರಸ್ತೆ, ಪ್ರೌಢಶಾಲೆಗಳ ಕೊಠಡಿಗಳಿಗೆ, ಹೊಸದರೋಜಿ ಗ್ರಾಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

