ಬೆಂಗಳೂರು: ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಗೋವಾ ಸರ್ಕಾರ ಒಡ್ಡುತ್ತಿರುವ ಅಡೆತಡೆಗಳ ಬಗ್ಗೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜತೆಗೆ, ವಿಳಂಬ ಮಾಡದೆ ಯೋಜನೆಗೆ ಅನುಮೋದನೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಯೋಜನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ.
ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (ಎನ್‌ಬಿಡಬ್ಲ್ಯು) 80 ನೇ ಸ್ಥಾಯಿ ಸಮಿತಿ ಸಭೆಯಲ್ಲಿ ಕಣಕುಂಬಿಯಲ್ಲಿ ಕಳಸಾ ಬಂಡೂರಿ ಯೋಜನೆಯಡಿ ನೀರನ್ನು ತಿರುಗಿಸುವ ಬಗ್ಗೆ ಚರ್ಚಿಸಲಾಗಿದೆ.
ಕಾಳಿ ಮತ್ತು ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ನಡುವಿನ ಹುಲಿ ಕಾರಿಡಾರ್‌ನಿಂದ 10.68 ಹೆಕ್ಟೇರ್ ಅರಣ್ಯ ಭೂಮಿಯನ್ನು ಡೈವರ್ಶನ್ ವೇರ್, ಪಂಪ್‌ಹೌಸ್, ವಿದ್ಯುತ್ ಸಬ್‌ಸ್ಟೇಷನ್, ಪೈಪ್‌ಲೈನ್ ಮತ್ತು ನಿರ್ಮಾಣ ಚುಟುವಟಿಕೆಗಾಗಿ ಬಳಸಲು ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆ ಸಭೆಯಲ್ಲಿ ಚರ್ಚೆಯ ಪ್ರಮುಖ ಅಜೆಂಡಾವಾಗಿತ್ತು. ಖಾನಾಪುರ ತಾಲೂಕಿನಲ್ಲಿ ಕಳಸಾ ನಾಲಾ ತಿರುವು ಯೋಜನೆ ನಿರ್ಮಾಣಕ್ಕಾಗಿ ಕಣಕುಂಬಿ ಮತ್ತು ಇತರ ಅಕ್ಕಪಕ್ಕದ ಗ್ರಾಮಗಳಲ್ಲಿ ವಿದ್ಯುತ್ ಲೈನ್ ಅಳವಡಿಸುವುದನ್ನೂ ಇದು ಒಳಗೊಂಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

