ನವದೆಹಲಿ: ಭಾರತ ಮತ್ತು ಚೀನಾ ನಡುವೆ ಸಂಘರ್ಷದ ಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನಗಳು ನಡೆಯುತ್ತಿರುವಾಗಲೇ, ಗಡಿಯಲ್ಲಿರುವ ಪ್ಯಾಂಗಾಂಗ್ ಲೇಕ್ ಬಳಿ ಚೀನಾ ಹೊಸದಾಗಿ ಸೇನಾ ಬಳಕೆಗೆ ವಸಾಹತು ನಿರ್ಮಾಣ ಮಾಡುತ್ತಿದೆ.
2020ರಲ್ಲಿ ಚೀನಾ ಮತ್ತು ಭಾರತ ನಡುವೆ ಸಂಭವಿಸಿದ ಗಾಲ್ವಾನ್ ಸಂಘರ್ಷದ ಸ್ಥಳದಿಂದ 38 ಕಿ.ಮೀ.ದೂರದಲ್ಲಿ ಈ ವಸಾಹತು ನಿರ್ಮಾಣವಾಗುತ್ತಿದೆ. ಪ್ಯಾಂಗಾಂಗ್ ತ್ಸೋ ಲೇಕ್ ಜಗತ್ತಿನಲ್ಲೇ ಎತ್ತರ ಪ್ರದೇಶದಲ್ಲಿರುವ ಉಪ್ಪು ನೀರಿನ ಸರೋವರವಾಗಿದೆ. ಚೀನಾ ವಸಾಹತು ನಿರ್ಮಾಣ ಚಿತ್ರಗಳನ್ನು ಉಪಗ್ರಹದ ಮೂಲಕ ಸೆರೆ ಹಿಡಿಯಲಾಗಿದೆ.
ಸುಮಾರು 17 ಎಕರೆಯಲ್ಲಿ 100ಕ್ಕೂ ಹೆಚ್ಚು ಕಟ್ಟಡಗಳನ್ನು ಕ್ಷಿಪ್ರಗತಿಯಲ್ಲಿ ನಿರ್ಮಿಸಲಾಗುತ್ತಿದೆ ಈ ವಸಾಹುತು ಮೂಲೆಯಲ್ಲಿ ಸುಮಾರು 150 ಮೀ. ಉದ್ದದ ಆಯತಾಕಾರದ ಸ್ಟ್ರಿಪ್ ಕೂಡ ನಿರ್ಮಾಣ ಮಾಡಲಾಗುತ್ತಿದ್ದು, ಭವಿಷ್ಯದಲ್ಲಿ ಹೆಲಿಕಾಪ್ಟರ್‌ಗೆ ಬಳಕೆಯಾಗಬಹುದು ಎಂದು ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌ನಲ್ಲಿ ಪ್ರೊಫೆಸರ್ ಆಗಿರುವ ವೈ ನಿತ್ಯಾನಂದಂ ಹೇಳಿದ್ದಾರೆ.
ಈ ವಸಾಹತು ನಿರ್ಮಾಣವನ್ನು 2024ರ ಏಪ್ರಿಲ್‌ನಲ್ಲಿ ಶುರು ಮಾಡಲಾಗಿದ್ದು, ಸರೋವರದ ಕಡೆಗೆ ಇಳಿಜಾರು ಇರುವ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆಡಳಿತಾತ್ಮಕ ಮತ್ತು ಕಾರ್ಯಾಚರಣೆಗಳಿಗಾಗಿ 2 ಭಾಗಗಳಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನುತ್ತವೆ ಸೇನಾ ಮೂಲಗಳು. ವಸತಿಗಾಗಿ ನಿರ್ಮಾಣ ಮಾಡಲಾಗುತ್ತಿರುವ ಕಟ್ಟಡಗಳು ಬಹುತೇಕ ಪೂರ್ಣಗೊಳ್ಳುವ ಹಂತವನ್ನು ತಲುಪಿವೆ ಎನ್ನಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

