ಬೆಂಗಳೂರು: ಪರಿಹಾರ ಧನ ಸಿಕ್ಕಿದೆ ಎಂದು ಗೊತ್ತಾದರೆ ಕೆಲವರು ಶೇ 10-15 ಬಡ್ಡಿ ಕೊಡುತ್ತೇವೆ ಎಂದು ಬರುತ್ತಾರೆ ಯಾಮಾರಿದರೆ ಹಣ ಕಳೆದುಕೊಳ್ಳುತ್ತೀರಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಕೆಎಸ್‌ಆರ್‌ಟಿಸಿ ನೌಕರರ ಕುಟುಂಬಗಳಿಗೆ ಎಚ್ಚರಿಸಿದರು.
ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ತಲಾ ₹ 1 ಕೋಟಿ, ಅನಾರೋಗ್ಯದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ ₹ 10 ಲಕ್ಷ ಪರಿಹಾರವನ್ನು ಕೆಎಸ್‌ಆರ್‌ಟಿಸಿ 63ನೇ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ವಿತರಿಸಿ ಅವರು ಮಾತನಾಡಿದರು.
ಪರಿಹಾರದ ಹಣವನ್ನು ಮನೆ ಕಟ್ಟಲು, ಮಕ್ಕಳ ಭವಿಷ್ಯಕ್ಕೆ ಬಳಸಿ, ಇಲ್ಲವೇ ಬ್ಯಾಂಕ್‌ನಲ್ಲಿಡಿ ಬೇರೆಯವರ ಕೈಗೆ ನೀಡಿದರೆ ವಾಪಸ್ ಬರುವುದಿಲ್ಲ ಎಂದು ಸಲಹೆ ಮಾಡಿದರು.
ಕೆಎಸ್‌ಆರ್‌ಟಿಸಿಯಲ್ಲಿ 1,200, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಆರ್‌ಟಿಸಿಯಲ್ಲಿ 300 ಬಸ್ ಸೇರಿ ಇಲ್ಲಿಯವರೆಗೆ 1,500 ಬಸ್‌ಗಳನ್ನು ತಲಾ ₹ 4 ಲಕ್ಷ ವೆಚ್ಚದಲ್ಲಿ ಪುನಶ್ಚೇತನಗೊಳಿಸಿದೆ ಇದರಿಂದ ಬಸ್‌ಗಳ ಕೊರತೆ ಸಮಸ್ಯೆ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಾಲ್ಕು ನಿಗಮಗಳಲ್ಲಿ 1,000 ಜನರಿಗೆ ಅನುಕಂಪ ಆಧಾರಿತ ಉದ್ಯೋಗ ನೀಡಲಾಗಿದೆ. ಈಗ ಸುಮಾರು 9,000 ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿವರಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

