ಹೊಸಪೇಟೆ: ಸೋಲಾರ್ ದೀಪ, ಹೈಮಾಸ್ಕ್ ದೀಪಗಳಿಗೆ ಅನವಶ್ಯಕವಾಗಿ ಹಣ ಖರ್ಚು ಮಾಡಬೇಡಿ ಅಗತ್ಯ ಕಾರ್ಯಗಳಿಗೆ ಹಣ ಬಳಸಿ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮಗಳಲ್ಲಿ ಸೋಲಾರ್ ದೀಪ, ಹೈಮಾಸ್ಕ್ ದೀಪ ಅಳವಡಿಸುವುದು ಬೇಡ, ಈಗಾಗಲೇ ಇರುವ ವಿದ್ಯುತ್ ಕಂಬಳಿಗೆ ಅವಶ್ಯಕತೆ ಇದ್ದಲ್ಲಿ ಹೆಚ್ಚುವರಿಯಾಗಿ ದೀಪಗಳನ್ನು ಅಳವಡಿಸಿ, ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ, ಅಂಗನವಾಡಿಗಳ ಸಮರ್ಪಕ ನಿರ್ವಹಣೆಗೆ ಒತ್ತು ನೀಡಿ ಎಂದು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಹಡಗಲಿ ತಾಲೂಕಿನ ಹಕ್ಕಂಡಿ ಗ್ರಾಮದಲ್ಲಿ 1ನೇ ಅಂಗನವಾಡಿ ಕೇಂದ್ರಕ್ಕೆ ಸುತ್ತಲು ಕಾಂಪೌಂಡ್ ನಿರ್ಮಾಣ ಕಾಮಗಾರಿ ಮತ್ತು ಗ್ರಾಮ ವಿವಿಧ ಕಡೆಗಳಲ್ಲಿ ಹೈಮಾಸ್ಕ್ ದೀಪಗಳನ್ನು ನಿರ್ಮಿಸಲು, ಹಗರಿಬೊಮ್ಮನಹಳ್ಳಿ ತಾಲೂಕಿನ ಮರಬ್ಬಿಹಾಳು, ಕಲ್ಲಹಳಿ, ಹೊಸಕೇರಿ ಮತ್ತು ಬನ್ನಿಗೋಳ ಗ್ರಾಮಗಳಲ್ಲಿ ನೀರಿನ ಪೈಪ್‍ಲೈನ್ ನಿರ್ಮಾಣ, ಸಿಸಿ ಚರಂಡಿ ನಿರ್ಮಾಣ, ಮತ್ತು ಹೈಮಾಸ್ಕ್ ದೀಪ ನಿರ್ಮಾಣ ಕಾಮಗಾರಿ ಮತ್ತು ಹೊಸಪೇಟೆ ತಾಲೂಕಿನ ಬುಕ್ಕಸಾಗರದಲ್ಲಿ ಹೈಮಾಸ್ಕ್ ದೀಪ ನಿರ್ಮಾಣಕ್ಕೆ ಗ್ರಾಮ ಪಂಚಾಯಿತ್ ಪಿಡಿಒಗಳು ಯೋಜನೆ ರೂಪಿಸಿದ್ದರು.
ಈ ಯೋಜನೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಯಾವುದೇ ಗ್ರಾಮಕ್ಕೂ ಹೈಮಾಸ್ಕ್ ದೀಪಗಳು ಬೇಡ., ಅವಶ್ಯವಿದ್ದರೆ ಹೆಚ್ಚುವರಿಯಾಗಿ ಇರುವ ಕಂಬಗಳಿಗೆ ದೀಪಗಳನ್ನು ಅಳವಡಿಸಿಕೊಳ್ಳಿ. ನೀರಿನ ಪೈಪ್‍ಲೈನ್ ಬದಲಿಗೆ ಪ್ರತಿ ಮನೆಯ ಮುಂದೆ ಕಟ್ಟೆ ನಿರ್ಮಾಣ ಮಾಡಿ 100 ಲೀಟರ್ ನೀರಿನ ಟ್ಯಾಂಕ್ ಕೂರಿಸಿ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶರಣಪ್ಪ ಮುದಗಲ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಎಸ್., ಡಿ.ಹೆಚ್.ಒ ಡಾ.ಶಂಕರ್ ನಾಯ್ಕ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಬಿ.ರಾಮಚಂದ್ರಪ್ಪ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

