ನವದೆಹಲಿ: ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಇಂದು ಎರಡು ವರ್ಷ ಪೂರ್ಣಗೊಳಿಸಿದ್ದು, ಪಕ್ಷದ ಬಲವರ್ಧನೆಗಾಗಿ ಅವರ ಕೊಡುಗೆಯನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿನ ಪಕ್ಷದ ನಾಯಕರು ಗುಣಗಾನ ಮಾಡಿದ್ದಾರೆ. ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಕ್ಟೋಬರ್ 26, 2022 ರಂದು ಅಧಿಕಾರ ಸ್ವೀಕರಿಸಿದ್ದರು.
ಅವರು 24 ವರ್ಷಗಳಲ್ಲಿ ಈ ಹುದ್ದೆಗೆ ಆಯ್ಕೆಯಾದ ಮೊದಲ ಗಾಂಧಿಯೇತರ ನಾಯಕರಾಗಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿನ ತಮ್ಮ ನಿವಾಸದಲ್ಲಿ ಕೇಕ್ ಕತ್ತರಿಸುವ ಮೂಲಕ 82 ವರ್ಷದ ಖರ್ಗೆ ಅವರು ಸಂಭ್ರಮಿಸಿದ್ದಾರೆ. ರಾಹುಲ್ ಗಾಂಧಿ, ಅಜಯ್ ಮಾಕೇನ್, ಜೈರಾಮ್ ರಮೇಶ್ ಕುಮಾರಿ ಶೆಲ್ಜಾ ಮತ್ತಿತರ ನಾಯಕರು ಖರ್ಗೆ ಅವರಿಗೆ ಶುಭ ಕೋರಿದ್ದಾರೆ.
ಖರ್ಗೆ ಅವರ ಎರಡು ವರ್ಷಗಳ ಅಧಿಕಾರವಧಿಯಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸುಧಾರಣೆ ಕಂಡಿದೆ. 2019ರ ಚುನಾವಣೆಯಲ್ಲಿ 52 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಅಲ್ಲದೇ ಹಿಮಾಚಲ ಪ್ರದೇಶ, ಕರ್ನಾಟಕ, ತೆಲಂಗಾಣದಲ್ಲಿ ಪಕ್ಷ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಜಮ್ಮು- ಕಾಶ್ನೀರದಲ್ಲಿ ಮೈತ್ರಿ ಸರ್ಕಾರದ ಭಾಗವಾಗಿದೆ ಆದಾಗ್ಯೂ, ಛತ್ತೀಸ್ ಗಢ, ರಾಜಸ್ಥಾನ, ಹರಿಯಾಣ ಮತ್ತು ಮಧ್ಯಪ್ರದೇಶದಲ್ಲಿ ಅಧಿಕಾರಿ ಹಿಡಿಯುವಲ್ಲಿ ವಿಫಲವಾಗಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಖರ್ಗೆ ಅವರಿಗೆ ಶುಭ ಕೋರಿ ಫೋಸ್ಟ್ ಮಾಡಿರುವ ರಾಹುಲ್ ಗಾಂಧಿ, ನಿಮ್ಮ ನಾಯಕತ್ವ ಜನರ ಸೇವೆ ಮಾಡುವ ಪಕ್ಷದ ಸಂಕಲ್ಪವನ್ನು ಬಲಪಡಿಸಿದೆ ನಿಮ್ಮ ಹೋರಾಟ ಮತ್ತು ಅನುಭವ ನಮಗೆ ಸ್ಫೂರ್ತಿಯಾಗಿದೆ. ಸಂವಿಧಾನ ಮತ್ತು ಸಾರ್ವಜನಿಕ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ನ್ಯಾಯದ ಪ್ರತಿಯೊಬ್ಬ ಯೋಧರಿಗೂ ನಿಮ್ಮ ಮಾರ್ಗದರ್ಶನ ಮೌಲ್ಯಯುತವಾಗಿದೆ ಎಂದು ಬರೆದುಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

