ಬೆಂಗಳೂರು: ಭಾರಿ ಮಳೆಯಿಂದ ನಗರದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗುತ್ತಿದ್ದು, ಈ ಸಮಸ್ಯೆಗೆ ಪರಿಹಾರ ಕಲಿಸಲು 2,000 ಕೋಟಿ ವೆಚ್ಚದಲ್ಲಿ 253 ಕಿ.ಮೀ. ರಾಜಕಾಲುವೆ ತಡೆಗೋಡೆ ಮರು ನಿರ್ಮಾಣ ಮಾಡಲು ಯೋಜನಾ ವರದಿಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಾದ್ಯಂತ ಉಂಟಾಗಿರುವ ಅತಿವೃಷ್ಟಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರ ಜತೆ ಸಭೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿ ನಡೆಸಿದರು.
ಬೆಂಗಳೂರು ನಗರದಲ್ಲಿ ಅಕ್ಟೋಬರ್‌ನಲ್ಲಿ 100 ವರ್ಷಗಳ ಮೂರನೇ ಅತಿ ಹೆಚ್ಚು ದಾಖಲೆಯ ಮಳೆಯಾಗಿದೆ. ಪರಿಣಾಮ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿದೆ. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ರಾಜಕಾಲುವೆ ಒತ್ತುವರಿ ತೆರವು, ತಡೆಗೋಡೆ ನಿರ್ಮಾಣಕ್ಕೆ ಆದೇಶ ನೀಡಿದ್ದೆ. ಈ ವೇಳೆ 250ಕ್ಕೂ ಹೆಚ್ಚು ಕಿ.ಮೀ. ರಾಜಕಾಲುವೆ ತಡೆಗೋಡೆ ನಿರ್ಮಾಣ ಮಾಡಿದ್ದೆವು. ಇನ್ನೂ 173 ಕಿ.ಮೀ. ತಡೆಗೋಡೆ ನಿರ್ಮಾಣ ಹಾಗೂ 80 ಕಿ.ಮೀ. ಕಟ್ಟಡ ಕಲ್ಲು ರಾಜಕಾಲುವೆ ಪುನರ್ ನಿರ್ಮಾಣ ಬಾಕಿ ಇದೆ ಹೀಗಾಗಿ ಪ್ರತಿ ವರ್ಷ ಮಳೆ ಬಂದ ತಕ್ಷಣ ಅನಾಹುತಗಳು ಸಂಭವಿಸುತ್ತಿವೆ. ಇದೀಗ ವಿಶ್ವಸಂಸ್ಥೆಯು ರಾಜಕಾಲುವೆ ಪುನರ್ ನಿರ್ಮಾಣಕ್ಕೆ ₹2,000 ಕೋಟಿ ನೀಡಲು ಮುಂದೆ ಬಂದಿದೆ. 3-4 ತಿಂಗಳಲ್ಲಿ ಈ ಯೋಜನೆ ಕಾಮಗಾರಿ ಶುರು ಮಾಡಲಾಗುವುದು. ಮುಂದಿನ ಸಂಪುಟ ಸಭೆಯಲ್ಲೇ ಯೋಜನಾ ವರದಿಗೆ ಅಂಗೀಕಾರ ನೀಡಲಾಗುವುದು. ಏಕಕಾಲದಲ್ಲಿ ಅಭಿವೃದ್ಧಿ ಮಾಡುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

