ಬೆಂಗಳೂರು: ಈ ಬಾರಿ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಸುರಿದ ವಾಡಿಕೆಗಿಂತ ಹೆಚ್ಚು ಮಳೆಯ ಕಾರಣ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಮಳೆಯಿಂದಾಗಿ ಮನೆಗಳು ಸಹ ಹಾನಿಯಾಗಿವೆ ಮೂರು ದಿನಗಳಲ್ಲಿ ಜಂಟಿ ಸಮೀಕ್ಷೆ ಪೂರ್ಣಗೊಳ್ಳಲಿದ್ದು, ಮುಂದಿನ 15 ದಿನಗಳಲ್ಲಿ ರೈತರ ಖಾತೆಗೆ ಬೆಳೆ ನಷ್ಟ ಪರಿಹಾರ ಜಮೆಯಾಗಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಜಗಳೂರು ತಾಲೂಕಿನ ಸಂಗೇನಹಳ್ಳಿ ಕೆರೆ ಕೋಡಿ ವೀಕ್ಷಣೆ ಮಾಡಿದರು, ಹಿರೇಮಲ್ಲನಹೊಳೆಯಲ್ಲಿ ಹಾನಿಯಾದ ಮನೆ ವೀಕ್ಷಣೆ ಮತ್ತು ಬೆಳೆಗಳ ವೀಕ್ಷಣೆ ನಂತರ ಮಾತನಾಡಿದ ಅವರು ರಾಜ್ಯದಲ್ಲಿ ಹಿಂಗಾರು ಹಂಗಾಮಿನ ಅಕ್ಟೋಬರ್ ತಿಂಗಳಲ್ಲಿಯೇ ಶೇ 66 ರಷ್ಟು ಸುರಿದ ಅಧಿಕ ಮಳೆಯಿಂದ ರಾಜ್ಯದಲ್ಲಿ ಈವರೆಗೆ 56993 ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿ ಉಂಟಾದ ವರದಿ ಇದ್ದು ಮುಂದಿನ ಮೂರು ದಿನಗಳಲ್ಲಿ ಜಂಟಿ ಬೆಳೆ ಸಮೀಕ್ಷೆ ನಡೆಸಿ ಹಾನಿಯಾದ ರೈತರಿಗೆ ಬರುವ 15 ದಿನಗಳಲ್ಲಿ ಡಿಬಿಟಿ ಮೂಲಕ ಬೆಳೆ ನಷ್ಟ ಪರಿಹಾರ ಒದಗಿಸಲಾಗುತ್ತದೆ ಎಂದು ಸಚಿವರು ಹೇಳಿದರು.
ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್ ತಿಂಗಳಲ್ಲಿಯೇ ಅತೀ ಹೆಚ್ಚು ಮಳೆಯಾಗಿದ್ದು ಪ್ರಾಥಮಿಕ ಅಂದಾಜು ಬೆಳೆ ನಷ್ಟಕ್ಕಿಂತ ಇನ್ನೂ ಹೆಚ್ಚಿನ ಬೆಳೆ ನಷ್ಟವಾಗಿರುವ ವರದಿ ನಿರೀಕ್ಷಿಸಲಾಗಿದ್ದು ಮೂರು ದಿನಗಳಲ್ಲಿ ಜಂಟಿ ಸಮೀಕ್ಷೆಯ ನಂತರ ಬೆಳೆ ನಷ್ಟದ ನಿಖರತೆ ತಿಳಿಯಲಿದೆ. ಹಿಂಗಾರು ಹಂಗಾಮಿನಲ್ಲಿ 21 ಜನರ ಪ್ರಾಣಹಾನಿಯಾಗಿದ್ದು ಇದರಲ್ಲಿ 9 ಜನರು ಸಿಡಿಲಿನಿಂದ ಮರಣ ಹೊಂದಿದ್ದರೆ, 6 ಜನರು ಮನೆ ಕುಸಿತದಿಂದ ಸಾವನ್ನಪ್ಪಿದ್ದಾರೆ. 3 ರಿಂದ 4 ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮುಂಗಾರು ಸೇರಿದಂತೆ ಇಲ್ಲಿಯವರೆಗೆ 121 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಚಿವರು ವಿವರಿಸಿದರು.
ಮುಂಗಾರು ಹಂಗಾಮಿನಲ್ಲಿ 2589 ಮತ್ತು ಹಿಂಗಾರಿನಲ್ಲಿ 121 ಮನೆಗಳು ಬಿದ್ದು ಹೋಗಿವೆ. ಇವರಿಗೆ ಮನೆ ಪರಿಹಾರದ ಜೊತೆಗೆ ಮನೆ ನಿರ್ಮಿಸಿಕೊಡಲಾಗುತ್ತದೆ. ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ ಮನೆ ಬಿದ್ದು ಹೋಗಿದ್ದಲ್ಲಿ ಎಸ್.ಡಿ.ಆರ್.ಎಫ್ ನಡಿ 1 ಲಕ್ಷ ಪರಿಹಾರ ನೀಡಲಾಗುತ್ತದೆ. ಮುಂಗಾರು ಹಂಗಾಮಿನಲ್ಲಿ 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಷ್ಟವಾಗಿದ್ದು ಈಗಾಗಲೇ ಪರಿಹಾರ ನೀಡಲಾಗಿದ್ದು ಕೆಲವೇ ದಿನಗಳಲ್ಲಿ ಮುಂಗಾರು ಬೆಳೆನಷ್ಟ ಪರಿಹಾರ ಪಾವತಿ ಪೂರ್ಣವಾಗಲಿದೆ ಎಂದು ಸಚಿವರು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

