ಶಿವಮೊಗ್ಗ: ಬಡವರು, ಕೂಲಿ ಕಾರ್ಮಿಕರಿಗೆ ಆಸರೆ ಆಗಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆ ಆಗದಿದ್ದರೆ ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಇಂದಿರಾ ಕ್ಯಾಂಟಿನ್‌ಗಳಿಗೆ ಭೇಟಿ ನೀಡಿ ಊಟ ಮಾಡಿ ಆಹಾರ ಪೂರೈಕೆ ಗುಣಮಟ್ಟ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಹೊಸದಾಗಿ 200 ಇಂದಿರ ಕ್ಯಾಂಟಿನ್ ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದರಲ್ಲಿ ಈಗಾಗಲೇ 180 ಕ್ಯಾಂಟಿನ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇಲ್ಲಿ ಕೂಲಿ ಕಾರ್ಮಿಕರು ಸೇರಿ ನೂರಾರು ಮಂದಿ ಪ್ರತಿದಿನ ಊಟ ಮಾಡುತ್ತಿದ್ದಾರೆ. ಯಾವುದೇ ಲೋಪ ನಡೆದರೆ ಸಹಿಸುವುದಿಲ್ಲ ಎಂದರು.
ಅಧಿಕಾರಿ, ಜನಪ್ರತಿನಿಧಿಗಳು ಇಂದಿರಾ ಕ್ಯಾಂಟಿನ್‌ಗೆ ಬಂದು ಪರಿಶೀಲಿಸಲಿದ್ದಾರೆ ಎಂದು ಗೊತ್ತಾದಾಗ ಕ್ಯಾಂಟಿನ್ ವ್ಯವಸ್ಥಾಪಕ ಹೋಟೆಲ್‌ನಿಂದ ಗುಣಮಟ್ಟದ ಆಹಾರ ತಂದು ಕಣ್ಣೊರೆಸುವ ತಂತ್ರ ಮಾಡುತ್ತಾರೆ. ಇಂದಿರಾ ಕ್ಯಾಂಟಿನ್‌ನಲ್ಲಿ ಪೂರೈಕೆ ಆಗುತ್ತಿರುವ ಆಹಾರ ಗುಣಮಟ್ಟದಿಂದ ಕೂಡಿರುವುದಿಲ್ಲ ಎಂದು ಸಾರ್ವಜನಿಕರಿಂದ ದೂರುಗಳಿವೆ ಎಂಬ ಪ್ರಶ್ನೆಗೆ ಈ ರೀತಿಯ ಅವ್ಯವಸ್ಥೆ ಕಂಡುಬಂದಲ್ಲಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಲ್ಲಿ ಗುಣಮಟ್ಟದ ಆಹಾರ ಪೂರೈಕೆಯಾಗಬೇಕು ಎಂದು ಹೇಳಿದರು.
ಸಚಿವರ ಜೊತೆ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





