ಬೆಳಗಾವಿ : ಕಳೆದ ವರ್ಷ ರಾಜ್ಯ ಬರಕ್ಕೆ ತುತ್ತಾಗಿದ್ದರೆ, ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಬೆಳೆಹಾನಿಯಾಗಿದೆ. ಬರ ಪರಿಹಾರವಾಗಿ ರಾಜ್ಯ ಸರ್ಕಾರ ಕಳೆದ ವರ್ಷ ರೂ.4200 ಕೋಟಿ ಹಣವನ್ನು ರೈತರಿಗೆ ಪರಿಹಾರದ ರೂಪದಲ್ಲಿ ನೀಡಿದರೆ, ಮಳೆಹಾನಿಗೆ ಈ ವರ್ಷ ರೂ.297 ಕೋಟಿ ಹಣವನ್ನು ಪರಿಹಾರವಾಗಿ ರೈತರಿಗೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು.
ಇಂದು ಶೂನ್ಯವೇಳೆ ಚರ್ಚೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಉಂಟಾದ ಮಳೆಹಾನಿ ಹಾಗೂ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸದನಕ್ಕೆ ಉತ್ತರ ನೀಡಿದ ಅವರು, “ಕಳೆದ ವರ್ಷದ ಬರ ಗಾಲದಲ್ಲಿ ರಾಜ್ಯ ಸರ್ಕಾರ 45 ಲಕ್ಷ ರೈತರಿಗೆ ರೂ.4200 ಕೋಟಿ ಹಣ ಪರಿಹಾರ ನೀಡಿದೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಈ ವರ್ಷ ಪೂರ್ವ ಮುಂಗಾರಿನಲ್ಲಿ ವಾಡಿಕೆ ಮಳೆ 115 ಮಿ.ಮೀ. ಆದರೆ, ವಾಸ್ತವದಲ್ಲಿ 151 ಮಿ.ಮೀ ಮಳೆಯಾಗಿದೆ. ಮುಂಗಾರಿನಲ್ಲಿ ವಾಡಿಕೆ 852 ಮಿ.ಮೀ. ಆದರೆ, 928 ಮಿ.ಮೀ ಮಳೆಯಾಗಿದೆ. ಹಿಂಗಾರಿನಲ್ಲಿ ವಾಡಿಕೆ ಮಳೆ 173 ಮಿ.ಮೀ. ವಾಸ್ತವವಾಗಿ 213 ಮಿ.ಮೀ ಮಳೆಯಾಗಿದೆ. ಎಲ್ಲಾ ಸೇರಿ ಒಟ್ಟಾರೆ ವಾಡಿಕೆಗಿಂತ ಶೇ.20 ರಷ್ಟು ಹೆಚ್ಚು ಮಳೆಯಾಗಿದೆ. ಎಲ್ಲಾ ಕಡೆ ಒಂದೇ ರೀತಿ ಮಳೆಯಾಗಿಲ್ಲ. ಕೆಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯೂ ಆಗಿದೆ” ಎಂದು ತಿಳಿಸಿದರು.
ಮುಂದುವರೆದು, “ಪ್ರಸ್ತುತ ಮುಂಗಾರು ಅವಧಿಯಲ್ಲಿ 1,59,718 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿತ್ತು. ಆಯಾ ಬೆಳೆಗೆ ಅನುಗುಣವಾಗಿ ಒಟ್ಟು ರೂ.94.94 ಕೋಟಿ ಪರಿಹಾರ ವಿತರಿಸಲಾಗಿದೆ. ಹಿಂಗಾರು ಹಂಗಾಮಿನಲ್ಲಿ 1,45,254 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ರೂ.112.17 ಕೋಟಿ ಹಣವನ್ನು ರೈತರಿಗೆ ಪರಿಹಾರವಾಗಿ ಮಂಜೂರು ಮಾಡಲಾಗಿದೆ. ಕೆಲವು ಭಾಗದಲ್ಲಿ ರೈತರಿಗೆ ಪರಿಹಾರ ಹಣ ಖಾತೆಗೆ ಜಮಾ ಆಗಿದೆ. ಕೆಲವು ಭಾಗಗಳಲ್ಲಿ ಆಗುತ್ತಿದೆ. ಮುಂದಿನ ಒಂದೆರಡು ವಾರದಲ್ಲಿ ಎಲ್ಲಾ ರೈತರ ಖಾತೆಗಳಿಗೂ ಪರಿಹಾರ ಹಣ ಸಂದಾಯವಾಗಲಿದೆ. ಆದರೆ, ಕಳೆದ ವರ್ಷ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಕೇಂದ್ರದಿಂದ ಬರ ಪರಿಹಾರ ಹಣ ಪಡೆದಿತ್ತು. ಆದರೆ, ಈ ವರ್ಷದ ಎನ್‌ಡಿಆರ್‌ಎಫ್ ಹರಿಹಾರದ ಹಣ ಇನ್ನೂ ಸಂದಾಯವಾಗಿಲ್ಲ” ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

