ಮೈಸೂರು: ನಗರಕ್ಕೆ ಹೊಂದಿಕೊಂಡಿರುವ ಹಾಗೂ ಹೊರವಲಯದ ಪ್ರದೇಶಗಳು ಮತ್ತು ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಕುಡಿಯುವ ನೀರು ಪೂರೈಕೆ ‘ಜಾಲ’ ಬಲಗೊಳಿಸಲು ‘ಅಮೃತ್ 2.0’ ಯೋಜನೆಯಡಿ ಅನುದಾನದ ‘ಶಕ್ತಿ’ ದೊರೆತಿದೆ. ಅಂದಾಜು ಮೊತ್ತ ₹455.66 ಕೋಟಿಯಲ್ಲಿ ಒಟ್ಟು 10 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಕೇಂದ್ರ ಪುರಸ್ಕೃತವಾದ ಈ ಯೋಜನೆಯಡಿ ಲಭ್ಯ ಅನುದಾನದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ವಿವಿಧ ಹಂತದಲ್ಲಿವೆ.
ಎಲ್ಲವೂ ಅಂದುಕೊಂಡಂತೆಯೇ ನಡೆದು ಕಾಮಗಾರಿಗಳು ಪೂರ್ಣಗೊಂಡಲ್ಲಿ ಹೊರವಲಯದ ಬಡಾವಣೆಗಳು, ನಗರ, ಪಟ್ಟಣಗಳಲ್ಲಿ ನೀರು ಪೂರೈಕೆಯ ಪರಿಸ್ಥಿತಿ ಸುಧಾರಿಸಲಿದ್ದು, ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ಆಶಿಸಲಾಗಿದೆ. ಜನರ ಬಹುದಿನಗಳ ಬೇಡಿಕೆಗೆ ಸ್ಪಂದನೆ ದೊರೆತಂತಾಗಲಿದೆ. ಎಲ್ಲ ಕಾಮಗಾರಿಗಳನ್ನೂ 2024ರ ವಿವಿಧ ತಿಂಗಳುಗಳಲ್ಲಿ ಆರಂಭಿಸಲಾಗಿದ್ದು, ಪೂರ್ಣಗೊಳಿಸಲು ಒಟ್ಟು ಎರಡು ವರ್ಷಗಳ ಅವಧಿಯನ್ನು ಆಯಾ ಗುತ್ತಿಗೆದಾರರಿಗೆ ನೀಡಲಾಗಿದೆ.
ವ್ಯವಸ್ಥೆ ಸುಧಾರಿಸಲು: ಹುಣಸೂರು ಹಾಗೂ ಪಿರಿಯಾಪಟ್ಟಣಕ್ಕೆ ಕಾವೇರಿ ನದಿ ಮೂಲದಿಂದ ನೀರು ಸರಬರಾಜು ವ್ಯವಸ್ಥೆ ಅಭಿವೃದ್ಧಿಪಡಿಸುವ ಯೋಜನೆ ಕೈಗೊಳ್ಳಲಾಗಿದೆ. ಸರಗೂರು ಹಾಗೂ ಕೆ.ಆರ್. ನಗರ ಪಟ್ಟಣಗಳಲ್ಲಿ ನೀರು ಪೂರೈಕೆ ವ್ಯವಸ್ಥೆ ಸುಧಾರಣೆಗೆ ಕ್ರಮ ವಹಿಸಲಾಗಿದೆ. ಎಚ್.ಡಿ. ಕೋಟೆ ಪಟ್ಟಣಕ್ಕೆ ಕಪಿಲಾ ನದಿ ಮೂಲದಿಂದ ನೀರು ತಂದು ಒದಗಿಸುವುದು ಯೋಜನೆಯ ಭಾಗವಾಗಿದೆ.
ಇದಲ್ಲದೇ, ಮೈಸೂರು ನಗರ ಸುತ್ತಮುತ್ತಲಿನ ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ರಮ್ಮನಹಳ್ಳಿಯ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬೋಗಾದಿ ಹಾಗೂ ಕಡಕೊಳ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 2ನೇ ಹಂತದ ನೀರು ಸರಬರಾಜು ಯೋಜನೆ ಕೈಗೊಳ್ಳಲಾಗಿದೆ. ನೂರಾರು ಮನೆಗಳಿಗೆ ನೇರವಾಗಿ ಸಂಪರ್ಕ ಒದಗಿಸಲಾಗುತ್ತಿದೆ. ಒಟ್ಟು 25 ಜಲಸಂಗ್ರಹಾಗಾರಗಳನ್ನು ನಿರ್ಮಿಸಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

