ಬೀದರ್: ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ತರಬೇಕೆಂದು ಆಗ್ರಹಿಸಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದ ಕಾರ್ಯಕರ್ತರು ಶನಿವಾರ ನಗರದಲ್ಲಿ ತಮಟೆ ಚಳವಳಿ ನಡೆಸಿದರು.
ನಗರದಲ್ಲಿನ ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಮನೆಯ ಎದುರು ತಮಟೆ ಬಾರಿಸಿ, ಪ್ರತಿಭಟನೆ ನಡೆಸಿದರು. ಬಳಿಕ ಮನವಿ ಪತ್ರ ಸಲ್ಲಿಸಿದರು.
ಒಳಮೀಸಲು ಜಾರಿಗೆ ತರಬೇಕೆನ್ನುವುದು ಮಾದಿಗ ಸಮುದಾಯದ ಮೂರು ದಶಕಗಳ ಬೇಡಿಕೆಯಾಗಿದೆ. ಸುಪ್ರೀಂಕೋರ್ಟ್ ಕೂಡ ಜಾರಿಗೆ ಹಸಿರು ನಿಶಾನೆ ತೋರಿದೆ. ಈಗಾಗಲೇ ಹರಿಯಾಣ ಹಾಗೂ ಪಂಜಾಬ್‌ನಲ್ಲಿ ಒಳಮೀಸಲಾತಿ ಜಾರಿಗೆ ತರಲಾಗಿದೆ. ಆದರೆ, ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ರಾಜ್ಯ ಸರ್ಕಾರ ಮಾದಿಗರಿಗೆ ಅವಮಾನ ಮಾಡಿದೆ. ಸರ್ಕಾರದ ಕಣ್ಣು ತೆರೆಸಲು ರಾಜ್ಯದ ಎಲ್ಲ ಶಾಸಕರ ಮನೆ ಎದುರು ಹೋರಾಟ ನಡೆಸಲಾಗುತ್ತಿದೆ. ಡಿ. 16ರಂದು ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.
ಸಮಿತಿ ರಾಜ್ಯ ಕಾರ‍್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್, ಜಿಲ್ಲಾಧ್ಯಕ್ಷ ವಿಜಯಕುಮಾರ ಹಿಪ್ಪಳಗಾಂವ್, ಉಪಾಧ್ಯಕ್ಷ ಕಮಲಾಕರ ಹೆಗಡೆ, ಕಾರ‍್ಯಾಧ್ಯಕ್ಷ ಪೀಟರ್ ಚಿಟಗುಪ್ಪ, ರಾಹುಲ್, ಜೈಶೀಲ್, ಹರೀಶ್, ರಾಜಕುಮಾರ ಪಿಳ್ಳೆಕರ್, ಶಿವಣ್ಣ ಹಿಪ್ಪಳಗಾಂವ್, ವೀರಶೆಟ್ಟಿ, ಸಂಜು ರಾಮದಾಸ, ಲಾಲಪ್ಪ ನಿರ್ಣಾ ಹಾಜರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

