ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯ ₹ 3 ಕೋಟಿ ಅನುದಾನದಲ್ಲಿ ಕೈಗೆತ್ತಿಕೊಂಡಿದ್ದ ನಗರದ ಆನಂದ ಹೋಟೆಲ್-ಎಸ್.ಎಂ. ಪಂಡಿತ ರಂಗಮಂದಿರ ಮಧ್ಯದ 700 ಮೀಟರ್ ಸಿ.ಸಿ. ರಸ್ತೆಯನ್ನು ಶಾಸಕ ಅಲ್ಲಮಪ್ರಭು ಪಾಟೀಲ ಲೋಕಾರ್ಪಣೆ ಮಾಡಿದರು.
ರಸ್ತೆ, ಚರಂಡಿ, ಕಲ್ವರ್ಟ್, ಸಿ.ಡಿ ಹಾಗೂ ಪಾದಚಾರಿ ಮಾರ್ಗವುಳ್ಳ ಈ ರಸ್ತೆ ಉದ್ಘಾಟಿಸಿ ಮಾತನಾಡಿದ ಶಾಸಕ ಅಲ್ಲಮಪ್ರಭು, ‘ಬಹಳ ಗಟ್ಟಿಮುಟ್ಟಾದ ರಸ್ತೆ ನಿರ್ಮಾಣವಾಗಿದ್ದು, 1.6 ಮೀಟರ್ ಅಗಲವಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದೆವು. ಹಾಗಾಗಿ, ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ಮೀಸಲಾಗಿಡಲಾಗಿದೆ. ಕೆಕೆಆರ್‌ಡಿಬಿಯು ಕಲಬುರಗಿ ದಕ್ಷಿಣ ಕ್ಷೇತ್ರಕ್ಕೆ ₹ 9 ಕೋಟಿ ಮಾತ್ರ ಹಂಚಿಕೆ ಮಾಡಿದೆ. ಅದರಲ್ಲೇ ಪ್ರಮುಖ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ. ಹೆಚ್ಚಿನ ಅನುದಾನ ಕೊಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ಹೇಳಿದ್ದಾರೆ’ ಎಂದರು.
ವಿಠ್ಠಲ ನಗರದಲ್ಲಿ ಒಳರಸ್ತೆಗಳ ನಿರ್ಮಾಣ ಮಾಡಲು ನಿವಾಸಿಗಳು ಬೇಡಿಕೆ ಸಲ್ಲಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆಯೂ ಗಮನ ಸೆಳೆದಿದ್ದಾರೆ. ಅಧಿವೇಶನದ ಬಳಿಕ ಎಲ್ ಅಂಡ್ ಟಿ ಕಂಪನಿಯವರನ್ನು ಕರೆದುಕೊಂಡು ಬಂದು ದುರಸ್ತಿ ಮಾಡಿಸುತ್ತೇನೆ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ಅಲ್ಲಮಪ್ರಭು ಅವರು ಕೆಕೆಆರ್‌ಡಿಬಿ ಮೈಕ್ರೊ, ಮ್ಯಾಕ್ರೊ ಹಾಗೂ ಮುಖ್ಯಮಂತ್ರಿಗಳ ವಿವೇಚನಾ ನಿಧಿಯಿಂದ ಹೆಚ್ಚಿನ ಅನುದಾನ ತರುತ್ತಿದ್ದಾರೆ. ಕಳೆದ 25 ವರ್ಷಗಳಲ್ಲಿ ಆಗದಷ್ಟು ಅಭಿವೃದ್ಧಿ ಕೆಲಸಗಳು ಈಗ ಆಗುತ್ತಿವೆ’ ಎಂದು ಶ್ಲಾಘಿಸಿದರು.
ಮಹಾನಗರ ಪಾಲಿಕೆ ಮೇಯರ್ ಯಲ್ಲಪ್ಪ ನಾಯಕೊಡಿ ಮಾತನಾಡಿ, ‘ಗುಣಮಟ್ಟದ ರಸ್ತೆಯು ನಿರ್ಮಾಣವಾಗಿದ್ದು, ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಫುಟ್‌ಪಾತ್ ಆಕ್ರಮಿಸಿಕೊಂಡು ಅಂಗಡಿ ಇಡಬಾರದು. ಸ್ವಯಂಪ್ರೇರಣೆಯಿಂದ ತೆರವುಗೊಳಿಸದಿದ್ದರೆ ಪಾಲಿಕೆ ಅಧಿಕಾರಿಗಳೇ ತೆರವುಗೊಳಿಸಬೇಕಾಗುತ್ತದೆ’ ಎಂದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಗೋಪಾಲರೆಡ್ಡಿ ಮುದಿರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ಮುಖಂಡರಾದ ಸಂಗಮೇಶ ನಾಗನಹಳ್ಳಿ, ಸುಭಾಷ್ ಮಂಗಾಣೆ, ವಾಣಿಶ್ರೀ ಸಗರಕರ, ಶೋಭಾ ಪಾಟೀಲ, ಬಡಾವಣೆಯ ನಾಗರಿಕರಾದ ಅಭಿಜಿತ್ ಪಾಟೀಲ, ಹಣಮಂತ ದೇಶಪಾಂಡೆ, ರಮೇಶ ಯಳಸಂಗಿಕರ್ ಇತರರು ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

