ವಿಜಯಪುರ: ಭಾರತ ಶೀಘ್ರದಲ್ಲಿ ವೈದ್ಯಕೀಯ ಮತ್ತು ಉತ್ಪಾದನೆ ಕ್ಷೇತ್ರಗಳಲ್ಲಿ ವಿಶ್ವದ ಹಬ್ ಆಗಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಕೇಂದ್ರ ಇಂಧನ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ 12ನೇ ಘಟಿಕೋತ್ಸವದಲ್ಲಿ ಅವರು ಭಾಷಣ ಮಾಡಿದರು. ಭಾರತದಲ್ಲಿ ಹೇರಳವಾದ ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲವಿದೆ. ಪ್ರಾಚೀನ ಭಾರತದ ಆರ್ಯಭಟರಿಂದ ಹಿಡಿದು ಶಲ್ಯರವರೆಗೆ ಮತ್ತು ಇಂದಿನ ಯುವ ವೃತ್ತಿಪರ, ಪ್ರಾಮಾಣಿಕ ಮತ್ತು ಕೌಶಲ್ಯಯುತ ಯುವಕರು ದೇಶದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿದ್ದಾರೆ. ನಮ್ಮ ದೇಶದಲ್ಲಿ ಮೂಲಭೂತ ಸೌಕರ್ಯಗಳು ಹೆಚ್ಚಾಗುತ್ತಿರುವ ಪರಿಣಾಮ ಇಲ್ಲಿಗೆ ಹೂಡಿಕೆ ಮಾಡಲು ವಿದೇಶಿಗರೂ ಉಳಿದ ದೇಶಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಎಂದರು. ಭಾರತ ಈಗ ಪ್ರತಿಯೊಂದು ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದ್ದು, ಜಗತ್ತಿಗೆ ನಾನಾ ವಸ್ತುಗಳನ್ನು ಸರಬರಾಜು ಮಾಡುವಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿರುವ ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆಗಳು, ಹೂಡಿಕೆಗಳಿಗೆ ಇರುವ ಅವಕಾಶಗಳನ್ನು ಹಾಗೂ ವಿದೇಶಿಗರನ್ನು ಆಕರ್ಷಿಸುತ್ತಿದ್ದು, ಶೀಘ್ರದಲ್ಲಿ ಭಾರತ ಜಗತ್ತಿನ ವೈದ್ಯಕೀಯ ಮತ್ತು ಉತ್ಪಾದನೆ ಕ್ಷೇತ್ರಗಳ ಹಬ್ ಆಗಲಿದೆ ಎಂದು ಭರವಸೆ ನೀಡಿದರು.
ಉತ್ತರ ಕರ್ನಾಟಕದಲ್ಲಿ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯನ್ನು ಕಟ್ಟಿದ ಡಾ.ಫ.ಗು.ಹಳಕಟ್ಟಿ, ಬಂಥನಾಳ ಶ್ರೀಗಳು, ಬಿ.ಎಂ.ಪಾಟೀಲರು ಮತ್ತು ಈಗ ಅಧ್ಯಕ್ಷರಾಗಿರುವ ಎಂ.ಬಿ.ಪಾಟೀಲರು ಈ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಸಚಿವ ಎಂ.ಬಿ.ಪಾಟೀಲ ಅವರ ಕೆಲಸಗಳು ಜನಮೆಚ್ಚುಗೆಗೆ ಪಾತ್ರವಾಗಿವೆ. ಅಲ್ಲದೇ, ಈ ಶಿಕ್ಷಣ ಸಂಸ್ಥೆಯಲ್ಲಿ ಓದಿರುವ ಜನ ನಾನಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಲು ಅವರು ಕಾರಣರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯ ವಿಶ್ವದ ಶ್ರೇಷ್ಠ ವಿದ್ಯಾಲಯಗಳಲ್ಲಿ ಒಂದಾಗಲಿ. ಇಲ್ಲಿನ ಕ್ರೀಡಾಪಟುಗಳು ಓಲಂಪಿಕ್ಸ್‌ನಲ್ಲಿ ಪ್ರತಿನಿಧಿಸಿ ಬಸವನಾಡಿನ ಕೀರ್ತಿಯನ್ನು ಬೆಳಗುವಂತಾಗಲಿ ಎಂದು ಹಾರೈಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

